ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಕಮಿಷನ್ ಲಾಬಿಗಳು ಬಹಿರಂಗವಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರು ಬಿಲ್ ಗಾಗಿ ರಾಜ್ಯಪಾಲರಿಗೆ ದೂರು ನೀಡಿದ್ದರು. ಆಗ ಬಿಲ್ ಹಣ ಕೊಡದೇ ಕಮಿಷನ್ ಕುದುರಿಸುವ ಕೆಲಸ ಆಗುತ್ತಿತ್ತು. ಈಗ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನ ಮನೆಯಲ್ಲಿ ಅಪಾರ ಹಣ ಸಿಕ್ಕಿದೆ. ಈವರೆಗೂ ಗುತ್ತಿಗೆದಾರರ ಮನೆಯಲ್ಲಿ ಇಷ್ಟು ದೊಡ್ಡ ಹಣ ಸಿಕ್ಕಿರಲಿಲ್ಲ ಎಂದರು.
42 ಕೋಟಿ ಸಿಕ್ಕಿದ್ದಕ್ಕೂ ಗುತ್ತಿಗೆದಾರರ ಹಣ ಬಿಡುಗಡೆ ಆಗಿದ್ದಕ್ಕೂ ಲೆಕ್ಕ ಸರಿ ಇದೆ. ಸಿಕ್ಕಿಬಿದ್ದವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಕಾಂಟ್ರಾಕ್ಟರ್. ಇಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಅಧ್ಯಕ್ಷರು ಬಹಳ ಆತ್ಮೀಯರು. ಯಾರು ಕಮೀಷನ್ ಕೊಟ್ಟಿದ್ದಾರೋ ಅವರಿಗೆ ಹಣ ಕೊಟ್ಟಿದ್ದಾರೆ. ಬಡಪಾಯಿಗಳಿಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.