ರಾಷ್ಟ್ರಧ್ವಜ ವಿನ್ಯಾಸಕ್ಕಿಂದು ನೂರನೇ ವರ್ಷ । ಪತಾಕೆ ಶಿಲ್ಪಿಯ ಪುತ್ರಿಗೆ ಜಗನ್ ಸನ್ಮಾನ

Prasthutha|

ರಾಷ್ಟ್ರ ಧ್ವಜವನ್ನು ವಿನ್ಯಾಸಗೊಳಿಸಿ ಇಂದಿಗೆ  ನೂರು ವರ್ಷಗಳು ಪೂರ್ಣಗೊಂಡಿದೆ.  ಈ ಸಂದರ್ಭದಲ್ಲಿ ತ್ರಿವರ್ಣ ಧ್ವಜದ ಶಿಲ್ಪಿ ದಿ. ಪಿಂಗಳಿ ವೆಂಕಯ್ಯ ಅವರ ಕುಟುಂಬ ಸದಸ್ಯರನ್ನು ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್‌ ರೆಡ್ಡಿ ಶುಕ್ರವಾರ ಭೇಟಿ ಮಾಡಿ ಸನ್ಮಾನಿಸಿದ್ದಾರೆ. ಗುಂಟೂರು ಜಿಲ್ಲೆಯ ಮಾಚೆರ್ಲಾದಲ್ಲಿ ವಾಸಿಸುತ್ತಿರುವ ಪಿಂಗಳಿ ವೆಂಕಯ್ಯ ಪುತ್ರಿ ಘಂಟಸಾಲ ಸೀತಾ ಮಹಾಲಕ್ಷ್ಮಿ ಅವರನ್ನು ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಜಗನ್‌ ಗೌರವಿಸಿದರು. ಪಿಂಗಳಿ ಅವರ ಜೀವನ ವಿಶೇಷವನ್ನು ಅನಾವರಣಗೊಳಿಸುವ ಚಿತ್ರ ಪ್ರದರ್ಶನವನ್ನು ಸಹ ಮುಖ್ಯಮತ್ರಿ ಜಗನ್ ಉದ್ಘಾಟಿಸಿದ್ದಾರೆ.

- Advertisement -

ಇಂದು ಪ್ರತಿಯೊಬ್ಬರೂ ತಲೆಯೆತ್ತಿ ಗೌರವಿಸುವ ರಾಷ್ಟ್ರಧ್ವಜವನ್ನು  ಪಿಂಗಳಿ ಅವರು ಒಟ್ಟು 30 ದೇಶಗಳ ರಾಷ್ಟ್ರಧ್ವಜಗಳನ್ನು 5 ವರ್ಷಗಳ ಕಾಲ ಅಭ್ಯಸಿಸಿ, ಕೊನೆಗೆ ತ್ಯಾಗ, ಶಾಂತಿ, ಸಮೃದ್ಧಿಯ ಸಂಕೇತವಾದ ಕೇಸರಿ, ಬಿಳಿ, ಹಸಿರಿನ ತ್ರಿವರ್ಣಧ್ವಜವನ್ನು ವಿನ್ಯಾಸಗೊಳಿಸಿದ್ದರು. ಮೊದಲು ವಿನ್ಯಾಸಗೊಳಿಸಿದಾಗ ಚರಕವನ್ನು ಜೋಡಿಸಿದ್ದರು. ಆಮೇಲೆ ತ್ರಿವರ್ಣ ಧ್ವಜದಲ್ಲಿ ಚರಕದ ಬದಲಾಗಿ ಅಶೋಕ ಚಕ್ರವನ್ನು ಪರಿಗಣಿಸಲು ಸೂಚಿಸಿದ ಸರ್ವಪಳ್ಳಿ ರಾಧಾಕೃಷ್ಣನ್ ತ್ರಿವರ್ಣಕ್ಕೆ ಹೊಸ ಅರ್ಥ ಕಲ್ಪಿಸಿದರು. ತ್ರಿವರ್ಣ ಧ್ವಜದಲ್ಲಿ ಕೇಸರಿ ತ್ಯಾಗ ಮತ್ತು ಬಲಿದಾನ, ಬಿಳಿ ಸತ್ಯ, ಶಾಂತಿ ಮತ್ತು ಶುಭ್ರತೆ, ಹಸಿರು ಸಮೃದ್ಧಿ, ಸೌಹಾರ್ದತೆ, ಅಶೋಕ ನ್ಯಾಯ ಧರ್ಮದ ಸಂಕೇತಗಳನ್ನು ಸೂಚಿಸುತ್ತದೆ.

Join Whatsapp