ಬೆಂಗಳೂರು: ಹಸುಗಳ ಕೆಚ್ಚಲು ಕೊಯ್ದು ಕ್ರೌರ್ಯ ಮೆರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಕಾಟನ್ ಪೇಟೆ ಪೊಲೀಸರು ಭಾನುವಾರ ರಾತ್ರಿ ಬಂಧನಕ್ಕೊಳಪಡಿಸಿದ್ದಾರೆ.
ಆರೋಪಿಯನ್ನು ಶೇಕ್ ನಸ್ರು (30) ಎಂದು ಗುರುತಿಸಲಾಗಿದೆ . ಈತ ಬಿಹಾರ ರಾಜ್ಯದ ಚಂಪಾರನ್ ಜಿಲ್ಲೆ ಮೂಲದವನಾಗಿದ್ದು, ಘಟನೆ ನಡೆದ ಸ್ಥಳದಿಂದ 50 ಮೀಟರ್ ದೂರದಲ್ಲಿರುವ ಪ್ಲಾಸ್ಟಿಕ್ ಹಾಗೂ ಬಟ್ಟೆ ಹೊಲೆಯುವ ಅಂಗಡಿಯಲ್ಲಿ ಸಹಾಯಕನಾಗಿ ಈತ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಆರೋಪಿಯನ್ನು ಬಂಧನಕ್ಕೊಳಪಡಿಸಿರುವ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಆರೋಪಿಯನ್ನು ಜನವರಿ 24ರವರೆಗೆ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.ಕುಡಿದ ಮತ್ತಿನಲ್ಲಿ ಕೃತ್ಯದ ಎಸಗಿದ್ದ ಎನ್ನಲಾಗಿದೆ.
ಈ ಕೃತ್ಯದಲ್ಲಿ ಬೇರೆ ಯಾರೂ ಭಾಗಿಯಾಗಿರುವುದು ಕಂಡುಬಂದಿಲ್ಲ. ಆರೋಪಿಯನ್ನು ಬಂಧಿಸಿ ಜನವರಿ 24 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಚಿಕಿತ್ಸೆ ಬಳಿಕ ಹಸುಗಳು ಅಪಾಯದಿಂದ ಪಾರಾಗಿವೆ ಎಂದು ಡಿಸಿಪಿ (ಪಶ್ಚಿಮ) ಎಸ್ ಗಿರೀಶ್ ಅವರು ಹೇಳಿದ್ದಾರೆ.