ಬೆಂಗಳೂರು: ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ಹಾಗೂ ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಸೂಚನೆ ನೀಡಿದ ದಿನವೇ ನಾನು ಪ್ರಧಾನಿಗಳು ಮಧ್ಯ ಪ್ರವೇಶ ಮಾಡಬೇಕು ಎಂದು ನಾನು ಹೇಳಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಅವರು; ಈಗಲೂ ಪ್ರಧಾನಮಂತ್ರಿಗಳಿಗೆ ಮಧ್ಯಪ್ರವೇಶ ಮಾಡುವಂತೆ ನಾನು ಒತ್ತಾಯ ಮಾಡುತ್ತೇನೆ ಎಂದರು.
ನೀರು ಬಿಡಬೇಡಿ ಅಂತ ಮೊದಲ ದಿನವೇ ನಾನು ಹೇಳಿದ್ದೆ. ಸುಪ್ರೀಂ ಕೋರ್ಟಿಗೆ ತಮಿಳುನಾಡಿನವರು ಅರ್ಜಿ ಹಾಕಿದ್ದಾರೆ, ನಮ್ಮ ರಾಜ್ಯದಿಂದ ಕೂಡ ಅರ್ಜಿ ಹಾಕಿ. ಅಲ್ಲಿವರೆಗೂ ನೀರು ಬಿಡಬೇಡಿ ಎಂದು ಹೇಳಿದ್ದೆ. ನನ್ನ ಒತ್ತಡಕ್ಕೆ ಸರ್ವಪಕ್ಷ ಸಭೆ ಕೂಡ ಕರೆದಿದ್ದರು ಎಂದು ರಾಜ್ಯ ಸರ್ಕಾರದ ಮೇಲೆ ಕುಮಾರಸ್ವಾಮಿ ಆರೋಪ ಮಾಡಿದರು.
ಕುಮಾರಸ್ವಾಮಿ ಅವರು ಅಮಿತ್ ಶಾ ಅವರ ಜತೆ ಮಾತಾಡಿಕೊಂಡು ಬಂದಿದ್ದಾರೆ. ಅಲ್ಲೇ ಕಾವೇರಿ ವಿಚಾರವಾಗಿ ಮಾತಾಡಬೇಕಿತ್ತು ಎಂದು ಸಚಿವರೊಬ್ಬರ ಹೇಳಿಕೆಯ ಬಗ್ಗೆ ಕಿಡಿಕಾರಿದ ಅವರು; ಅವರು ಮೊದಲೇ ಹೇಳಿದ್ದರೆ ಮಾತಾಡಿಕೊಂಡು ಬರುತ್ತಿದ್ದೆ. ಅವರೂ ಹೋಗಿ ಕೇಂದ್ರ ಮಂತ್ರಿಗಳನ್ನು ಭೇಟಿ ಮಾಡಿಕೊಂಡು ಬಂದರಲ್ಲ, ಏನು ಮಾತಾಡಿಕೊಂಡು ಬಂದಿದ್ದಾರೆ ಅವರು ತಿರುಗೇಟು ನೀಡಿದರು ಮಾಜಿ ಮುಖ್ಯಮಂತ್ರಿಗಳು.
ಸುಪ್ರೀಂ ಕೋರ್ಟ್ ಮುಂದೆ ಈ ಸರಕಾರ ಏನು ವಾಸ್ತವಾಂಶ ಇಟ್ಟಿದೆ ಎಂದು ಹೇಳಲಿ. ದೇವೇಗೌಡರ ಬದ್ಧತೆ ಇವರಿಗೆ ಇದೆಯಾ? ಇವರಿಂದ ಕಲೀಬೇಕಾ? ಎಂದು ಖಾರವಾಗಿ ಪ್ರಶ್ನಿಸಿದ ಅವರು, ಹಿಂದೆ ಇದೇ ಸಿದ್ದರಾಮಯ್ಯ ಸರಕಾರ ಇದ್ದಾಗ ಕಾವೇರಿ ವಿಚಾರದಲ್ಲಿ ಇದೇ ಸ್ಥಿತಿ ಬಂದಾಗ ದೇವೇಗೌಡರ ಮನೆಗೆ ಓಡಿ ಬಂದಿದ್ದರಲ್ಲ. ಆಗ ದೇವೇಗೌಡರು ಗಾಂಧಿ ಪ್ರತಿಮೆ ಬಳಿ ಧರಣಿ ಕೂತರು. ಆಗ ಕೇಂದ್ರ ಸಚಿವರು ಓಡಿ ಬಂದರು. ಅದೆಲ್ಲಾ ಇವರಿಗೆ ಮರೆತುಹೋಗಿರಬೇಕು. ಇವರಿಂದ ನಾವು ಕಲೀಬೇಕಿಲ್ಲ ಎಂದು ಅವರು ಚಾಟಿ ಬೀಸಿದರು.
ಸುಪ್ರೀಂ ಕೋರ್ಟ್ ಮುಂದೆ ತಮಿಳುನಾಡು ಅರ್ಜಿ ಹಾಕಿಕೊಂಡಿದೆ. ನಾವೂ ಅರ್ಜಿ ಹಾಕಿಕೊಂಡಿದ್ದರೆ ಅಲ್ಲಿಯವರೆಗೂ ನೀರು ಉಳಿಯುತ್ತಿತ್ತು. ಅಷ್ಟು ಸಾಮಾನ್ಯ ತಿಳಿವಳಿಕೆಯೂ ಈ ಸರ್ಕಾರಕ್ಕೆ ಇಲ್ಲ ಎಂದು ಅವರು ತರಾಟೆಗೆ ತೆಗೆದುಕೊಂಡರು.
ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಸಭೆಗೆ ತಮಿಳುನಾಡು ಅಧಿಕಾರಿಗಳು ಖುದ್ದು ಹಾಜರಾಗುತ್ತಾರೆ. ನಮ್ಮ ಅಧಿಕಾರಿಗಳು ವರ್ಚುವಲ್ ಮೂಲಕ ಭಾಗವಹಿಸುತ್ತಾರೆ. ಹೀಗಿದ್ದಾಗ ಪ್ರಾಧಿಕಾರದ ಮುಂದೆ ಇವರು ಏನು ವಾಸ್ತವಾಂಶ ಇಡಲು ಸಾಧ್ಯ ಎಂದು ಅವರು ಕಿಡಿಕಾರಿದರು.
ಸಂಸದ ಬಸವರಾಜ್, ರಾಜಣ್ಣ ವಿರುದ್ಧ ಹೆಚ್ಡಿಕೆ ಕಿಡಿ
ತುಮಕೂರು ಜಿಲ್ಲೆಯ ಜನರು ದೇವೇಗೌಡರಿಗೆ ಮತ ಹಾಕಬಾರದು ಎಂದು ಹೇಳಿಕೆ ನೀಡಿರುವ ಸಂಸದ ಜಿ.ಎಸ್.ಬಸವರಾಜು ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹರಿಹಾಯ್ದರು.
ಅದ್ಯಾರೋ ಎಂಪಿ ಬಸವರಾಜ್ ಎಂಬ ವ್ಯಕ್ತಿಯ ಹೇಳಿಕೆ ಗಮನಿಸಿದೆ. ಆ ಜಿಲ್ಲೆಗೆ ಈ ವ್ಯಕ್ತಿಯ ಕೊಡುಗೆ ಏನು? ಈತನ ದರ್ಪದ ಹೇಳಿಕೆಯನ್ನು ಗಮನಿಸಿದ್ದೇನೆ. ಮತ್ತೆ ತುಮಕೂರಿನಲ್ಲಿ ದೇವೇಗೌಡರು ಸೋಲಿಸಬೇಕು ಅಂದಿದ್ದಾರೆ. ದೇವೇಗೌಡರು ಆ ಜಿಲ್ಲೆಗೆ ಏನೂ ಮಾಡಿಲ್ಲವಾದರೆ, ಈಗ ನೀನೇ ಎಂಪಿ ಆಗಿದೀಯಲ್ಲಪ್ಪಾ?ಏನು ಮಾಡಿದೀಯಪ್ಪಾ ಜಿಲ್ಲೆಗೆ ಎಂದು ವಾಗ್ದಾಳಿ ನಡೆಸಿದರು.
ಈ ಸರ್ಕಾರದ ಸಹಕಾರ ಸಚಿವ ಹೇಳಿದ್ದಾರೆ. ದೇವೇಗೌಡರು ಚುನಾವಣೆಗೆ ನಿಲ್ಲಬೇಕು, ನಾವು ಋಣ ತೀರಿಸಬೇಕು ಅಂತ ವ್ಯಂಗ್ಯವಾಗಿ ಹೇಳಿದ್ದಾರೆ. ಕಳೆದ ಚುನಾವಣೆಯಲ್ಲಿ ನೀವು ಋಣ ತೀರಿಸಿದ್ದು ನೋಡಿದ್ದೇವೆ. ಇವರೆಲ್ಲಾ ದೇವೇಗೌಡರ ಹೆಸರು ಹೇಳಿಕೊಂಡು ರಾಜಕೀಯಕ್ಕೆ ಬಂದವರು. ಈ ಹಿಂದೆ ದೇವೇಗೌಡರು ಹುಷಾರಿಲ್ಲದ್ದರು ಹೋಗಿ ಇವರ ಪರ ಪ್ರಚಾರ ಮಾಡಿದ್ದಕ್ಕೇ ಇವರು ಗೆದ್ದಿದ್ದು. ಆಗ ಕೇವಲ 700 ಮತಗಳ ಅಂತರದಿಂದ ಗೆದಿದ್ದನ್ನು ಮರೆತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.