ಉಡುಪಿ: ಉಡುಪಿ ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಾರಂಭವಾದ ಹಿಜಾಬ್ ವಿಚಾರವನ್ನು ಸ್ಥಳೀಯ ಮಟ್ಟದಲ್ಲಿ ಮುಗಿಸದೆ ಅಲ್ಲಿನ ಬಿಜೆಪಿ ಶಾಸಕರ ಕುಮ್ಮಕ್ಕಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೂ ಹಬ್ಬುವಂತೆ ಮಾಡಿ ನಿನ್ನೆ ಹೈಕೋರ್ಟ್ನಲ್ಲಿ ಹಿಜಾಬ್ ವಿಚಾರಣೆ ನಡೆಯುವಾಗ ರಾಜ್ಯಾದ್ಯಂತ ಏಕ ಕಾಲದಲ್ಲಿ ಕೇಸರಿ ಶಾಲು ಮತ್ತು ಪೇಟ ಧರಿಸಿಕೊಂಡು ಜೈ ಶ್ರೀರಾಮ್ ಘೋಷಣೆಯೊಂದಿಗೆ ಗಲಭೆ ನಡೆಸಿರುವುದರ ಹಿಂದೆ ಎಬಿವಿಪಿ ಮತ್ತು ಸಂಘಪರಿವಾರದ ಮುಖಂಡರ ಕೈವಾಡವಿದೆ ಎಂದು ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಜಾಬ್ ವಿರೋಧಿಸುವ ನೆಪದಲ್ಲಿ ಶಿವಮೊಗ್ಗ ಕಾಲೇಜಿನಲ್ಲಿ ರಾಷ್ಟ್ರಧ್ವಜ ಹಾರಿಸುವ ಧ್ವಜಸ್ತಂಭದಲ್ಲಿ ಭಾಗವಾಧ್ವಜ ಹಾರಿಸಿ,ರಾಜ್ಯಾದ್ಯಂತ ವಿದ್ಯಾರ್ಥಿಗಳನ್ನು ಪ್ರಚೋದಿಸಿ ಜೈ ಶ್ರೀ ರಾಮ್ ಘೋಷಣೆ ಕೂಗುವಂತೆ ಕೇಸರಿ ಶಾಲು ಒದಗಿಸಿ, ಸಾರ್ವಜನಿಕ ಆಸ್ತಿಗಳನ್ನು ಧ್ವಂಸ ಮಾಡಿಸಲಾಗಿದೆ. ಮಂಡ್ಯದಲ್ಲಿ ಕಾಲೇಜಿಗೆ ತೆರಳುತ್ತಿದ್ದ ಒಬ್ಬಂಟಿ ವಿದ್ಯಾರ್ಥಿನಿಯ ಮೇಲೆ ಮುಗಿಬಿದ್ದು ದೌರ್ಜನ್ಯ ಎಸಗಲಾಗಿದೆ. ಮಡಿಕೇರಿಯಲ್ಲಿ ಬಲವಂತವಾಗಿ ಕೇಸರಿ ಧರಿಸಲು ಹೇಳಿ ತನ್ನದೇ ಸಹಪಾಠಿಗೆ ಚೂರಿಯಿಂದ ಇರಿದು ರಾಜ್ಯಾದ್ಯಂತ ಒಂದೇ ಸಮಯದಲ್ಲಿ ಗಲಭೆಗೆ ನೇತೃತ್ವ ನೀಡಿದವರು ಸಂಘಪರಿವಾರವೆಂದು ಸ್ಪಷ್ಟವಾಗಿದೆ. ಆದರೆ ಇನ್ನೂ ಭಾಗವಾಧ್ವಜ ಹಾರಿಸಿದವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿಲ್ಲ. ಇಷ್ಟೆಲ್ಲಾ ರಾದ್ದಾಂತ ನಡೆಯುವಾಗ ಮುಖ್ಯಮಂತ್ರಿಯವರ ಮೌನ ಖಂಡನೀಯ ಎಂದು ಹೇಳಿದರು.
ಎಬಿವಿಪಿ ಮತ್ತು ಸಂಘಪರಿವಾರ ಇಷ್ಟೆಲ್ಲಾ ರಾದ್ದಾಂತ ರಾಜ್ಯಾದ್ಯಂತ ನಡೆಸಿದರೂ ಪ್ರಾಥಮಿಕ ಹಾಗೂ ಫ್ರೌಢಶಾಲಾ ಸಚಿವರಾದ ನಾಗೇಶ್ರವರು ಕ್ಯಾಂಪಸ್ ಫ್ರಂಟ್ ಮೇಲೆ ನಿರಾಧಾರ ಆರೋಪ ಮಾಡಿರುವುದು ಖಂಡನೀಯ. ಹಿಜಾಬ್ ವಿಚಾರದಲ್ಲಿ ಕ್ಯಾಂಪಸ್ ಫ್ರಂಟ್ ಯಾವತ್ತಿಗೂ ಮುಂಚೂಣಿಯಲ್ಲಿ ನಿಂತು ಸಂವಿಧಾನಕ್ಕೆ ಬದ್ದವಾಗಿ ವಿದ್ಯಾರ್ಥಿನಿಯರ ಸಾಂವಿಧಾನಿಕ ಹಕ್ಕುಗಳ ಪರವಾಗಿ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತದೆ ಎಂದು ಅಥಾವುಲ್ಲ ಪುಂಜಾಲಕಟ್ಟೆ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯ ಮಸೂದ್ ಮನ್ನಾ, ಜಿಲ್ಲಾಧ್ಯಕ್ಷರು,ಅಸೀಲ್ ಅಕ್ರಂ ಮತ್ತಿತರರು ಉಪಸ್ಥಿತರಿದ್ದರು.