ಮಾರ್ಚ್ 4ಕ್ಕೆ ಕಾರ್ಮಿಕರ ಬೃಹತ್ ವಿಧಾನಸೌಧ ಚಲೋ: ಸಿಐಟಿಯು ಕರೆ

Prasthutha|

ಬೆಂಗಳೂರು: ಸಂಕಷ್ಟದಲ್ಲಿರುವ ಕಾರ್ಮಿಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾರ್ಚ್ 4ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು), ಕರ್ನಾಟಕ ರಾಜ್ಯ ಸಮಿತಿಯು ತಿಳಿಸಿದೆ.

- Advertisement -

 ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಪ್ರಶ್ನಿಸಿ ಆರ್ಥಿಕ ಹೊಡೆತದಿಂದ ಕಂಗಾಲಾದ ಜನತೆಗೆ ಮತ್ತೆ ಕೋವಿಡ್ ಬಿಕ್ಕಟ್ಟಿನಿಂದಾಗಿ ಸಾಕಷ್ಟು ಆರ್ಥಿಕ ಹೊರೆಯ ಹೆಚ್ಚಳದಿಂದಾಗಿ ದುಡಿಯುವ ವರ್ಗಕ್ಕೆ ಸಾಕಷ್ಟು ಪೆಟ್ಟು ಬಿದ್ದಿದೆ. ಉತ್ಪಾದನೆ, ವ್ಯಾಪಾರ ವಹಿವಾಟು ನಡೆಯದೇ ತೀವ್ರವಾದ ತೊಂದರೆಯನ್ನು ಅನುಭವಿಸುತ್ತಿದೆ. ರಾಜ್ಯದಲ್ಲಿ 18 ರಿಂದ 50 ವರ್ಷದೊಳಗಿನ ಸುಮಾರು 11 ಲಕ್ಷ ಉದ್ಯೋಗ ಆಕಾಂಕ್ಷಿಗಳಿದ್ದಾರೆ, ಈಗಿರುವ ಉದ್ಯೋಗಗಳಲ್ಲಿಯೂ ಕೂಡಾ 46% ಸ್ವಯಂ, 27% ಕೂಲಿ ವೇತನ ಮತ್ತು 27% ಸಾಮಾನ್ಯ ಉದ್ಯೋಗಿಗಳಿದ್ದಾರೆ. ಈ ಉದ್ಯೋಗಗಳಲ್ಲಿಯೂ ಕೆಲಸ ಕಳೆದುಕೊಂಡವರು ಸೇರಿ ಈಗ ಒಟ್ಟು 20% ನಿರುದ್ಯೋಗಿಗಳಾಗಿದ್ದಾರೆ. ಕೆಲಸದಲ್ಲಿರುವವರು ಕೂಡಾ ಗುತ್ತಿಗೆ, ಹೊರಗುತ್ತಿಗೆ, ಗೌರವಧನ, ಅತಿಥಿಗಳು ಎನ್ನುವ ಹೆಸರಿನ ದುಡಿಮೆ ಅರೆಕಾಲಿಕವಾಗಿದ್ದರಿಂದ ಕುಟುಂಬಗಳಿಗೆ ಬರುವ ಆದಾಯವೂ ಕಡಿಮೆಯಾಗಿದೆ. ಕೊರೊನಾ ಸಂದರ್ಭದಲ್ಲಿ ಇರುವ ಉದ್ಯೋಗ, ಆದಾಯಗಳನ್ನು ಕಳೆದುಕೊಂಡವರಿಗೆ ರಾಜ್ಯ ಸರ್ಕಾರ ಸಹಕಾರಿಯಾಗಿ ನಿಲ್ಲುವ ಬದಲಿಗೆ ಅಗತ್ಯ ವಸ್ತುಗಳ ಬೆಲೆಯೇರಿಕೆ, ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ಗಳ ಮೇಲಿನ ಸಬ್ಸಿಡಿ ಕಡಿತದಿಂದಾಗಿ ಅಬಕಾರಿ ಸುಂಕದ ಹೆಚ್ಚಳವಾಗಿದ್ದರಿಂದ ಅನಿಯಂತ್ರಿತವಾಗಿ ಬೆಲೆಗಳು ಹೆಚ್ಚಳವಾಗಿವೆ.

ಇದರಿಂದ ರಾಜ್ಯದಲ್ಲಿ ಹಸಿವು, ಅಪೌಷ್ಟಿಕತೆ ಹೆಚ್ಚಳವಾಗಿ 13.2% ರಷ್ಟು ತೀವ್ರವಾದ ಬಡತನ ಹೆಚ್ಚಾಗಿದೆ ಎಂದು ಸಿಐಟಿಯು ಸಂಘಟನೆ ವಿವರಿಸಿದೆ. ಸರ್ಕಾರಿ ಮತ್ತು ಖಾಸಗಿ ವಲಯದ ಗುತ್ತಿಗೆ ಕಾರ್ಮಿಕರ ಖಾಯಮಾತಿಗೆ ಕಾನೂನು ರಚಿಸಬೇಕು. ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ ಭವಿಷ್ಯನಿಧಿ ಯೋಜನೆ ಜಾರಿಗೆ ಶಾಸನ ರೂಪಿಸಿ, ಕನಿಷ್ಠ 500 ಕೋಟಿ ಅನುದಾನಕ್ಕಾಗಿ ಒತ್ತಾಯಿಸಲಾಗುತ್ತಿದೆ. ಸೇವೆಯನ್ನೊಳಗೊಂಡು ಸಾರ್ವಜನಿಕ ಕ್ಷೇತ್ರಗಳ ಖಾಸಗೀಕರಣ ವಿರೋಧಿಸಿ, ರಾಜ್ಯದಲ್ಲಿ ರೈತ ವಿರೋಧಿ ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆ ಹಾಗೂ ಎಪಿಎಂಸಿ ಮಾರುಕಟ್ಟೆ ತಿದ್ದುಪಡಿ ಕಾಯ್ದೆ ರದ್ದತಿಗೆ ವಿರೋಧಿಸಿ ವಿಧಾನಸೌಧ ಚಲೋ ನಡೆಸಲಾಗುತ್ತಿದೆ. ಕಾರ್ಮಿಕರಿಗೆ ಹೆಚ್ಚಿನ ಅನುದಾನ ನೀಡುವ ಬದಲಿಗೆ ಇ-ಶ್ರಮ ವನ್ನು ರೂಪಿಸಿರುವ ಕೇಂದ್ರ ಸರ್ಕಾರವು ಯಾವುದೇ ಸೌಲಭ್ಯ ನೀಡಿಲ್ಲವಾದ್ದರಿಂದ ಅದು ಕೇವಲ ಅಸಂಘಟಿತ ಕಾರ್ಮಿಕನೆಂದು ಗುರುತಿಸಲು ಕಾರ್ಡ್ ಮಾತ್ರ ಎನ್ನುವಂತಾಗಿದೆ. ಅಲ್ಲದೆ, ಕಟ್ಟಡ ಕಾರ್ಮಿಕರ ಮಂಡಳಿಯಲ್ಲಿ ನೊಂದಾವಣೆಯಾಗಿರುವ ಲಕ್ಷಾಂತರ ಕಟ್ಟಡ ಕಾರ್ಮಿಕರಿಗೆ ಘೋಷಿಸಲಾದ 19 ಸೌಲಭ್ಯಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಬದಲಿಗೆ ಖರೀದಿಗಳ ಹೆಸರಿನಲ್ಲಿ ನೂರಾರು ಕೋಟಿ ದುರುಪಯೋಗವಾಗುತ್ತಿದೆ.

- Advertisement -

ಸರ್ಕಾರದ ವಿವಿಧ ಯೋಜನೆಗಳಲ್ಲಿ ಕೆಲಸ ಮಾಡುವ ಅಂಗನವಾಡಿ, ಬಿಸಿಯೂಟ, ಆಶಾ, ಐಸಿಪಿಎಸ್, ಎನ್ ಆರ್ ಎಚ್ ಎಂ, ಎನ್ ಹೆಚ್ ಎಂಗಳಲ್ಲಿ ದುಡಿಯುವವರಿಗೆ ಶಾಸನಬದ್ಧ ಸೌಲಭ್ಯಗಳನ್ನು ಕೊಡುವ ಬದಲಿಗೆ ಅನ್ಯಾಯ ಎಸಗಲಾಗುತ್ತಿದೆ. ಅಂಗನವಾಡಿ ಮತ್ತು ಬಿಸಿಯೂಟ ಯೋಜನೆಗಳನ್ನು ನೂತನ ಶಿಕ್ಷಣ ನೀತಿಯಿಂದ ರಕ್ಷಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಸಿಐಟಿಯು ಸಂಘಟನೆಯು ತಿಳಿಸಿದೆ. ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರನ್ನು ಕೊರೊನಾ ನೆಪದ ಕಾರಣಗಳವೊಡ್ಡಿ, ಹಲವರನ್ನು ಸಣ್ಣ-ಪುಟ್ಟ ಕೆಲಸದಿಂದ ತೆಗೆದಿರುವುದಲ್ಲದೆ, ಉತ್ಪಾದಕತೆಯಿದ್ದರೂ ಕೂಡಾ ವೇತನ ಹೆಚ್ಚಳದ ನಿರಾಕರಣೆ ಮಾಡುವುದರೊಂದಿಗೆ, ಸಂಘ ರಚನೆ ಮೂಲಭೂತ ಹಕ್ಕಿನ ಮೇಲೆ ದಾಳಿ ಮಾಡಲಾಗುತ್ತಿದೆ. ಕರ್ನಾಟಕ ಮಾಹಿತಿ ತಂತ್ರಜ್ಞಾನ, ವಿಶೇಷ ಆರ್ಥಿಕ ವಲಯಗಳು ವಿದೇಶಿ ಬಂಡವಾಳದ ಆಕರ್ಷಣೆಯಲ್ಲಿ ಮುಂಚೂಣಿಯಲ್ಲಿದೆ ಮತ್ತು ರಫ್ತಿನಲ್ಲಿಯೂ ಕೂಡಾ ಮುಂದಿದೆ. ಆದರೂ ಕೂಡ ಕಾರ್ಮಿಕರ ವೇತನದ ಪಾಲು 15.7% ಕ್ಕೆ ಇಳಿದು ಮಾಲೀಕರ ಲಾಭ 46.86ಕ್ಕೆ ಹೆಚ್ಚಳವಾಗಿದೆ. ಕಾರ್ಮಿಕರ ರಕ್ಷಣೆಯ ಅಸ್ತ್ರಗಳಂತೆ 29 ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿ, ಕೇವಲ 4 ಸಂಹಿತೆಗಳನ್ನಾಗಿ ಮಾಡುವ ಮುಖಾಂತರ ದುಡಿಯುವ ವರ್ಗವನ್ನು ಗುಲಾಮರನ್ನಾಗಿಸಲು ಸರ್ಕಾರವು ಹೊರಟಿದೆ. ಕೃಷಿಯಲ್ಲಿ ಬೆಂಬಲ ಬೆಲೆಯಿಲ್ಲದೆ ತಮ್ಮ ಶ್ರಮಕ್ಕೆ ಫಲವಾಗಿ ಹಲವು ಜನ ವಲಸಿಗರಾಗಿ ದುಡಿಯಲು ಬರುತ್ತಿದ್ದಾರೆ. ಆದರೆ, ಸರ್ಕಾರಗಳು ಮಾತ್ರ ಬಳಸಿ ಬಿಸಾಡುವ ನೀತಿಗಳನ್ನು ಅನುಸರಿಸುತ್ತಿರುವುದು ಖಂಡನೀಯವೆಂದು ಸಿಐಟಿಯು ತಿಳಿಸಿದೆ.

Join Whatsapp