ಹಿಜಾಬ್ ಧರಿಸಿ ಧರ್ಮ ಅನುಸರಿಸುವುದು ಹಕ್ಕು: ನಿಖತ್ ಝರೀನ್

Prasthutha|

“ಯಾರು ಯಾವ ವಸ್ತ್ರಗಳನ್ನು ಧರಿಸಬೇಕು ಎಂಬುದು ಅವರವರ ವೈಯಕ್ತಿಕ ಆಯ್ಕೆಗೆ ಬಿಟ್ಟ ವಿಚಾರ. ಹಿಜಾಬ್ ಧರಿಸಿ ಧರ್ಮ ಅನುಸರಿಸುವುದು ತಪ್ಪಲ್ಲ. ಸಂಪೂರ್ಣವಾಗಿ ಅದು ಅವರ ಹಕ್ಕು ಮತ್ತು ಆಯ್ಕೆ” ಎಂದು ವಿಶ್ವ ಬಾಕ್ಸಿಂಗ್ ಚಾಂಪಿಯನ್ ನಿಖತ್ ಝರೀನ್ ಹೇಳಿದ್ದಾರೆ.  ಕರ್ನಾಟದಲ್ಲಿ ಪ್ರಾರಂಭವಾಗಿ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿದ್ದ ಹಿಜಾಬ್ ವಿಚಾರದಲ್ಲಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಝರೀನ್ ಪ್ರತಿಕ್ರಿಯೆ ನೀಡಿದ್ದಾರೆ.  

- Advertisement -

“ಹಿಜಾಬ್ ಧರಿಸುವುದು ಸ್ವಂತ ಆಯ್ಕೆ. ಅವರ ಆಯ್ಕೆಯ ವಿಚಾರದಲ್ಲಿ ಮಾತನಾಡಲು ಸಾಧ್ಯವಿಲ್ಲ. ನಾನೂ ಅಂತಹ ವಸ್ತ್ರಧಾರಣೆ ಶೈಲಿ ಇಷ್ಟಪಡುತ್ತೇನೆ. ಆದರೆ ನಾನು ಹಿಜಾಬ್ ಧರಿಸದೇ ಇದ್ದರೆ, ನನ್ನ ಕುಟುಂಬದವರು ಪ್ರಶ್ನಿಸುವುದಿಲ್ಲ. ಜನರು ನನ್ನ ಬಗ್ಗೆ ಏನು ಹೇಳುತ್ತಾರೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ” ಎಂದು ಫ್ಲೈವೇಟ್ ವಿಭಾಗದ ಮಹಿಳಾ ವಿಶ್ವ ಚಾಂಪಿಯನ್ ಹೇಳಿದ್ದಾರೆ.

ಎನ್‌ಡಿಟಿವಿ ಸಂದರ್ಶನದಲ್ಲಿ ಮಾತನಾಡುತ್ತಿದ್ದ ವೇಳೆ ಝರೀನ್ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹೇಳಿದ್ದಾರೆ. ಇನ್ನೊಬ್ಬರ ವಸ್ತ್ರಧಾರಣೆ ಶೈಲಿಯಲ್ಲಿ ಮೂಗು ತೂರಿಸುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ. 

- Advertisement -

ಕರ್ನಾಟಕದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗುವುದನ್ನು ವಿರೋಧಿಸಿದ್ದ ಕೆಲ ಬಲಪಂಥೀಯ ಗುಂಪುಗಳು, ತೀವ್ರ ವಿವಾದ ಸೃಷ್ಟಿಸಿದ್ದವು. ಈ ಸಂಘಟನೆಗಳ ಒತ್ತಾಯಕ್ಕೆ ಮಣಿದಿದ್ದ ಸರ್ಕಾರ, ಹಿಜಾಬ್ ನಿಷೇಧಿಸಿ ಆದೇಶ ಹೊರಡಿಸಿತ್ತು. ಬಳಿಕ ವಿಷಯವು ನ್ಯಾಯಾಲಯದ ಮೆಟ್ಟಿಲೇರಿತ್ತು. ಕರ್ನಾಟಕ ಹೈಕೋರ್ಟ್ ಕಳೆದ ಮಾರ್ಚ್‌ನಲ್ಲಿ ನಿಷೇಧವನ್ನು ಎತ್ತಿಹಿಡಿದಿದೆ, ಹಿಜಾಬ್‌ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನ ಅಡಿಯಲ್ಲಿ ರಕ್ಷಿಸಬಹುದಾದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ತೀರ್ಪು ನೀಡಿತ್ತು.



Join Whatsapp