ಓಮಿಕ್ರಾನ್ ತುಂಬಾ ಸೌಮ್ಯ: ಬ್ರಿಟನ್ ಅಧ್ಯಯನ

Prasthutha|

ಬ್ರಿಟನ್ : ಕೊರೊನಾ ವೈರಾಣುವಿನ ಎಲ್ಲಾ ರೂಪಾಂತರ ತಳಿಗೆ ಹೋಲಿಸಿದರೆ ಓಮಿಕ್ರಾನ್‌ ರೂಪಾಂತರದ ತೀವ್ರತೆ ಕಡಿಮೆ. ಓಮಿಕ್ರಾನ್‌ ರೂಪಾಂತರ ತಳಿಯಿಂದ ಸೋಂಕಿಗೆ ಒಳಗಾದವರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಕಡಿಮೆಯಾಗಿದೆ ಎಂದು ಬ್ರಿಟನ್‌ನಲ್ಲಿ ನಡೆದ ಎರಡು ಅಧ್ಯಯನಗಳು ಹೇಳಿವೆ.

- Advertisement -

ಲಂಡನ್‌ನ ಇಂಪೀರಿಯಲ್‌ ಕಾಲೇಜ್‌ ಮತ್ತು ಎಡಿನ್‌ಬ್ರಾ ವಿಶ್ವವಿದ್ಯಾಲಯದ ಅಧ್ಯಯನ ಈ ಮಾಹಿತಿ ನೀಡಿದೆ.

ಓಮಿಕ್ರಾನ್‌ ಸೋಂಕು ದೃಢಪಟ್ಟವರು ಡೆಲ್ಟಾ ಸೋಂಕಿತರಿಗೆ ಹೋಲಿಸಿದರೆ ಆಸ್ಪತ್ರೆಯಲ್ಲಿ ಕಳೆಯಬೇಕಾದ ಪ್ರಮಾಣವು ಶೇ 40ರಿಂದ ಶೇ 45ರಷ್ಟು ಕಡಿಮೆ ಎಂದು ಇಂಪೀರಿಯಲ್‌ ಕಾಲೇಜಿನ ಅಧ್ಯಯನವು ಹೇಳಿದೆ.

- Advertisement -

ಈ ಹಿಂದೆ ಸೋಂಕಿಗೆ ಒಳಗಾಗದವರಿಗೆ ಹೋಲಿಸಿದರೆ ಈ ಹಿಂದೆ ಸೋಂಕಿಗೆ ಒಳಗಾಗಿದ್ದು ಮತ್ತೆ ಓಮಿಕ್ರಾನ್‌ ಸೋಂಕು ತಗುಲಿದವರು ಆಸ್ಪತ್ರೆಗೆ ದಾಖಲಾಗಬೇಕಾದ ಅಗತ್ಯ ಶೇ. 50ರಿಂದ ಶೇ. 60ರಷ್ಟು ಕಡಿಮೆ ಎಂದು ಈ ಅಧ್ಯಯನವು ತಿಳಿಸಿದೆ.

ಆದರೆ, ಓಮಿಕ್ರಾನ್‌ ಸೋಂಕಿನ ಹರಡುವಿಕೆ ಹೆಚ್ಚು ತೀವ್ರವಾಗಿದೆ ಎಂದೂ ಅಧ್ಯಯನಗಳು ಹೇಳಿವೆ. ಹರಡುವಿಕೆ ತೀವ್ರವಾಗಿದ್ದರೆ ಆರೋಗ್ಯ ಸೇವೆಗಳ ಬೇಡಿಕೆ ಭಾರಿ ಪ್ರಮಾಣದಲ್ಲಿ ಹೆಚ್ಚಬಹುದು ಎಂದು ಇಂಪೀರಿಯಲ್‌ ಕಾಲೇಜಿನ ಪ್ರಾಧ್ಯಾಪಕ ನೀಲ್‌ ಫರ್ಗ್ಯೂಸನ್‌ ಹೇಳಿದ್ದಾರೆ.

ಓಮಿಕ್ರಾನ್‌ನ 56,000 ಮತ್ತು ಡೆಲ್ಟಾದ 2,69,000 ಪ್ರಕರಣಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು.

ಅಲ್ಲದೆ, ಡೆಲ್ಟಾ ತಳಿಗೆ ಹೋಲಿಸಿದರೆ ಓಮಿಕ್ರಾನ್‌ ಸೋಂಕಿತರು ಆಸ್ಪತ್ರೆಗೆ ದಾಖಲಾಗಬೇಕಾದ ಸಾಧ್ಯತೆಯು ಮೂರನೇ ಎರಡರಷ್ಟು ಕಡಿಮೆ ಎಂದು ಎಡಿನ್‌ಬ್ರಾ ವಿಶ್ವವಿದ್ಯಾಲಯವು ನಡೆಸಿದ ಇನ್ನೊಂದು ಅಧ್ಯಯನವು ಹೇಳಿದೆ. ಆದರೆ ಈ ಅಧ್ಯಯನಕ್ಕೆ 15 ಸೋಂಕು ಪ್ರಕರಣಗಳನ್ನಷ್ಟೇ ಆಯ್ಕೆ ಮಾಡಿಕೊಳ್ಳಲಾಗಿದೆ.

ಸೋಂಕು ಹೆಚ್ಚು ವ್ಯಾಪಕವಾಗಿದ್ದ ದಕ್ಷಿಣ ಆಫ್ರಿಕಾದಿಂದ ಸಿಕ್ಕ ದತ್ತಾಂಶಗಳೂ ಇದನ್ನೇ ಹೇಳುತ್ತಿವೆ. ಇತರ ರೂಪಾಂತರ ತಳಿಗಳಿಗೆ ಹೋಲಿಸಿದರೆ ಓಮಿಕ್ರಾನ್‌ ಸೋಂಕಿತರನ್ನು ಆಸ್ಪತ್ರೆಗೆ ಸೇರಿಸಬೇಕಾದ ಅಗತ್ಯ ಶೇ 80ರಷ್ಟು ಕಡಿಮೆ. ಓಮಿಕ್ರಾನ್‌ ಸೋಂಕಿಗೆ ಒಳಗಾದ ರೋಗಿಗಳು ಗಂಭೀರ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯು ಡೆಲ್ಟಾ ತಳಿ ಸೋಂಕಿತರಿಗೆ ಹೋಲಿಸಿದರೆ ಶೇ 70ರಷ್ಟು ಕಡಿಮೆ ಎಂದು ಸೋಂಕು ರೋಗಗಳ ರಾಷ್ಟ್ರೀಯ ಸಂಸ್ಥೆಯು ಹೇಳಿದೆ.

ಟಿವಿ ಮಾಧ್ಯಮಗಳು ಭಯೋತ್ಪಾದನೆಯಲ್ಲಿ ನಿರತವಾದರೆ ಓಮಿಕ್ರಾನ್ ಬಗ್ಗೆ ಎಲ್ಲಾ ಅಧಿಕೃತ ಮಾಹಿತಿಗಳು ತೀವ್ರತೆ ಕಡಿಮೆ ಎಂದೇ ಹೇಳುತ್ತಿದೆ. ಆದರೆ ಜನತೆ ಆರೋಗ್ಯ ಸಂಬಂಧಿ ಎಚ್ಚರಿಕೆ ಯಾವತ್ತೂ ತೆಗೆದುಕೊಳ್ಳಬೇಕಿದೆ.

Join Whatsapp