ಒಮಿಕ್ರಾನ್ ಭೀತಿ: ಮಹಾರಾಷ್ಟ್ರದಲ್ಲಿ ಮತ್ತೆ ಶೇ.50ರ ನಿಯಮ ಜಾರಿ

Prasthutha|

ಮುಂಬೈ : ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ ಏರುತ್ತಿದ್ದಂತೆ, ನಿಯಂತ್ರಣಕ್ಕಾಗಿ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ದೇಶದಲ್ಲಿ ನೋಡನೋಡುತ್ತಿದ್ದಂತೆ ಒಮಿಕ್ರಾನ್ ಸೋಂಕಿತರ ಸಂಖ್ಯೆ 400 ದಾಟಿದ್ದು, ದೆಹಲಿ ಮತ್ತು ಮುಂಬೈನಲ್ಲಿಯೇ ಹೆಚ್ಚಿನ ಪ್ರಕರಣಗಳು ಕಾಣಿಸಿಕೊಂಡಿವೆ. ಇದೀಗ ಒಮಿಕ್ರಾನ್ ತಡೆಗೆ ಮಹಾರಾಷ್ಟ್ರ ಸರ್ಕಾರ ಕೆಲವು ನಿಯಮಗಳನ್ನು ಜಾರಿಗೊಳಿಸಿದ್ದು, ಇನ್ನು ಮುಂದೆ ಸಂಜೆ 9ಗಂಟೆಯಿಂದ ಬೆಳಗ್ಗೆ 6ಗಂಟೆವರೆಗೆ, 5 ಅಥವಾ ಅದಕ್ಕಿಂತ ಹೆಚ್ಚಿನ ಜನರು ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗೂಡುವಂತಿಲ್ಲ.

- Advertisement -

ಹೊಸ ವರ್ಷ ಆಚರಣೆಗೆ ಇನ್ನು ಒಂದು ವಾರಗಳಷ್ಟೆ ಬಾಕಿ ಇರುವಾಗ ಮಹಾರಾಷ್ಟ್ರ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇನ್ನು ಮುಂದೆ ಒಳಾಂಗಣ ಮದುವೆಗಳಲ್ಲಿ 100 ಮಂದಿ ಮಾತ್ರ ಪಾಲ್ಗೊಳ್ಳಬಹುದು. ಹೊರಾಂಗಣದಲ್ಲಿ ನಡೆಯುವ ಮದುವೆಯಲ್ಲಿ ಗರಿಷ್ಠ 250 ಜನರು ಮಾತ್ರ ಭಾಗವಹಿಸಬಹುದು.

ಜಿಮ್, ಹೋಟೆಲ್, ಬಾರ್, ಸ್ಪಾ, ಸಿನಿಮಾ ಥಿಯೇಟರ್ಗಳಲ್ಲಿ ಶೇ. 50 ಜನರಿಗೆ ಮಾತ್ರ ಅವಕಾಶ. ಕ್ರೀಡೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲೂ ಕೂಡ ಶೇ.50ರಷ್ಟು ಜನ ಮಾತ್ರ ಪಾಲ್ಗೊಳ್ಳಬಹುದು ಎಂದು ಶುಕ್ರವಾರ ಬಿಡುಗಡೆ ಮಾಡಲಾದ ಮಾರ್ಗಸೂಚಿಯಲ್ಲಿ ಮಹಾ ಸರ್ಕಾರ ಆದೇಶ ನೀಡಿದೆ. ಮುಂಬೈನಲ್ಲಿ ಕೊರೊನಾ ಸೋಂಕುನ ಸಂಖ್ಯೆ ಹೆಚ್ಚಳವಾಗಿದೆ. ನಿನ್ನೆ ಮಹಾರಾಷ್ಟ್ರದಲ್ಲಿ 1410 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 683 ಕೊವಿಡ್ 19 ಪ್ರಕರಣಗಳು ಮುಂಬೈನಲ್ಲೇ ಪತ್ತೆಯಾಗಿವೆ. ಹೀಗಾಗಿ ಕೊವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚಾದ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಮತ್ತೆ ಬಿಗಿ ಕ್ರಮಗಳಿಗೆ ಮುಂದಾಗಿದೆ.



Join Whatsapp