ಬೆಂಗಳೂರು: ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ‘ಒಮಿಕ್ರಾನ್’ ಕಾಣಿಸಿಕೊಂಡಿರುವ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದ ಇಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ, ವಿದೇಶಗಳಿಂದ ಬೆಂಗಳೂರಿಗೆ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ.
ನವೆಂಬರ್1 ರಿಂದ ಇದುವರೆಗೂ 94 ಪ್ರಯಾಣಿಕರು ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿದ್ದು, ಆ ಪೈಕಿ ಇಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಸೋಂಕು ಕಂಡು ಬಂದ ಪ್ರಯಾಣಿಕರಲ್ಲಿ ಒಬ್ಬರನ್ನು ಬಿಬಿಎಂಪಿ ವ್ಯಾಪ್ತಿಯ ಬೊಮ್ಮನಹಳ್ಳಿಯಲ್ಲಿ ಹಾಗೂ ಮತ್ತೊಬ್ಬರನ್ನು ಖಾಸಗಿ ಹೋಟೆಲ್ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇವರಲ್ಲಿ ಹೊಸ ತಳಿಯ ವೈರಸ್ ಕಂಡು ಬಂದಿರುವುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.
ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ಭೇಟಿ ನೀಡಿ, ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದ್ದಾರೆ. ಹೊರದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚು ನಿಗಾವಹಿಸುವಂತೆ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ.