ರೈತ ಹೋರಾಟಕ್ಕೆ ಪಾಪ್ಯುಲರ್ ಫ್ರಂಟ್ ನಿಂದ ಬೆಂಬಲ: ಸಂವಿಧಾನ ರಕ್ಷಣೆಗಾಗಿ ಹೋರಾಡುವಂತೆ ನಾಗರಿಕರಿಗೆ ಕರೆ ರಾಷ್ಟ್ರೀಯ ಅಧ್ಯಕ್ಷರು

Prasthutha|

ಹೊಸದಿಲ್ಲಿ: ಹೊಸ ಕೃಷಿ ಮಸೂದೆಗಳ ವಿರುದ್ಧ ರೈತ ಸಂಘಟನೆಗಳು ಹಮ್ಮಿಕೊಂಡಿರುವ ದಿಲ್ಲಿ ಚಲೊ ಜಾಥಾವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಂಬಲಿಸುವುದಾಗಿ ಸಂಘಟನೆಯ ರಾಷ್ಟ್ರೀಯ ಚೆಯರ್ಮ್ಯಾನ್ ಒ.ಎಂ.ಎ ಸಲಾಂ  ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಫ್ಯಾಶಿಸ್ಟ್ ಪಡೆಗಳಿಂದ ಬೆದರಿಕೆಗೊಳಗಾಗಿರುವ ಸಂವಿಧಾನವನ್ನು ರಕ್ಷಿಸಲು ಮುಂದೆ ಬರುವಂತೆ ಅವರು ಜನರಿಗೆ ಕರೆ ನೀಡಿದ್ದಾರೆ.

- Advertisement -

ಹೊಸ ಮಸೂದೆಗಳ ಮೂಲಕ ಮೋದಿ ಸರಕಾರ ಭಾರತೀಯ ಕೃಷಿಕರ ಪರಿಸ್ಥಿತಿಯನ್ನು ಶೋಚನೀಯಗೊಳಿಸಿದೆ ಮತ್ತು ಬಡವರ ವಿರೋಧಿ ಹಾಗೂ ಜನವಿರೋಧಿ ಬಂಡವಾಳಶಾಹಿ ಮುಖವನ್ನು ಹೊರಗೆಡಹಿದೆ. ಸರಕಾರವು ರೈತರ ವ್ಯಥೆಗೆ ಸರಕಾರ ಕಿವಿಗೊಡದೇ ಇದ್ದರೆ ಅದು ಬೇಗನೇ ರಾಷ್ಟ್ರದ ವ್ಯಥೆಯಾಗಿ ಬದಲಾಗಲಿದೆ. ಈ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ಹೋರಾಟವನ್ನು ಬೆಂಬಲಿಸುವುದು ದೇಶದ ಪ್ರತಿಯೋರ್ವ ನಾಗರಿಕನ ಕರ್ತವ್ಯವಾಗಿದೆ. ಬಿಜೆಪಿ ಆಡಳಿತದ ಹರಿಯಾಣದಲ್ಲಿ ಪೊಲೀಸರು ಹಿಂಸಾತ್ಮಕ ಕ್ರಮಗಳ ಮೂಲಕ ಮತ್ತು ನಾಯಕರನ್ನು ಬಂಧಿಸುವ ಮೂಲಕ ಅವರ ಜಾಥಾವನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಕಠಿಣ ಪದಗಳ ಮೂಲಕ ಇದನ್ನು ಖಂಡಿಸಬೇಕಾಗಿದೆ. ಈ ಹೋರಾಟಕ್ಕೆ ಪಾಪ್ಯುಲರ್ ಫ್ರಂಟ್   ತನ್ನ ಬೆಂಬಲವನ್ನು ವ್ಯಕ್ತಪಡಿಸುತ್ತದೆ ಮತ್ತು ರೈತರ  ಬೇಡಿಕೆಗಳ ಪರವಾಗಿ ನಿಲ್ಲುತ್ತದೆ ಎಂದು ಅವರು ಹೇಳಿದ್ದಾರೆ.

ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ದೇಶವು ಇಂದು ಸಂವಿಧಾನ ದಿನವನ್ನು ಆಚರಿಸುತ್ತಿದೆ. ಸಂವಿಧಾನವು ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ದಾಳಿಗೊಳಗಾಗುತ್ತಿದೆ. ಬಲಪಂಥೀಯ ಶಕ್ತಿಗಳು ಸಂವಿಧಾನದ ಬದಲಾಗಿ ಮನುಸ್ಮೃತಿಯನ್ನು ತರಲಾಗುವುದೆಂದು ಮುಕ್ತವಾಗಿ ಹೇಳುತ್ತಿದ್ದರೆ ಜನರ ಮೂಲಭೂತ ಹಕ್ಕುಗಳನ್ನು ಕಸಿಯುವುದಕ್ಕಾಗಿ ಮತ್ತು ಸಂವಿಧಾನದ ಮೂಲ ಅಡಿಪಾಯಗಳನ್ನು ದುರ್ಬಲಗೊಳಿಸುವುದಕ್ಕಾಗಿ ಅತ್ಯಂತ ಅಪಾಯಕಾರಿಯಾಗಿ ಹೊಸ ಕರಾಳ ಕಾನೂನುಗಳನ್ನು ತರಲಾಗುತ್ತಿದೆ. ಸಮಾಜದ  ಅವಕಾಶ ವಂಚಿತ ಮತ್ತು ಅಧಿಕಾರ ಶೂನ್ಯ ವರ್ಗದ ಅಮಾಯಕ ಜನರು ಈಗಾಗಲೇ ಇವುಗಳ ಪರಿಣಾಮಗಳನ್ನು ಎದುರಿಸಲು ಪ್ರಾರಂಭಿಸಿದ್ದಾರೆ. ತಮ್ಮ ರಾಜಕೀಯ ನಿಲುವುಗಳಿಗಾಗಿ ಮತ್ತು ಸರಾಕಾರದ ವಿರುದ್ಧದ ಅಭಿಪ್ರಾಯಗಳಿಗಾಗಿ ಅಮಾಯಕರನ್ನು ಜೈಲಿಗೆ ತಳ್ಳಲಾಗುತ್ತಿದೆ.  ತಮ್ಮ ಎಲ್ಲಾ ಭಿನ್ನತೆಯ ಹೊರತಾಗಿಯೂ  ಸಂವಿಧಾನವನ್ನು ರಕ್ಷಿಸುವುದಕ್ಕಾಗಿ ದೇಶದ ನಾಗರಿಕರು ಒಂದಾಗಿ ಹೋರಾಟ ಮಾಡುವ ಸಮಯ ಬಂದಿದೆ ಎಂದು ಅವರು ಎಚ್ಚರಿಸಿದ್ದಾರೆ.



Join Whatsapp