ಬೆಂಗಳೂರು: ಕರ್ನಾಟಕದಲ್ಲಿ Ola, Uber, Rapido ಆಟೋ, ಬೈಕ್ ನಿರ್ವಹಿಸುತ್ತಿರುವ ಸೇವೆಗಳು ಕಾನೂನುಬಾಹಿರವಾಗಿದ್ದು, ತಕ್ಷಣದಿಂದ ಸೇವೆಯನ್ನು ನಿಲ್ಲಿಸುವಂತೆ ಕರ್ನಾಟಕ ಸಾರಿಗೆ ಇಲಾಖೆ ನೋಟಿಸ್’ನಲ್ಲಿ ಸೂಚಿಸಿದೆ.
ಅನ್ ಡಿಮ್ಯಾಂಡ್ ಟ್ರಾನ್ಸ್ ಪೊರ್ಟೇಷನ್ ಟೆಕ್ನಾಲಜಿ ಅಗ್ರಿಗೇಟರ್ಸ್ ನಿಯಮಾವಳಿ–2016ರ ಪ್ರಕಾರ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸಲು ಕಂಪನಿಗಳಿಗೆ ಪರವಾನಗಿ ನೀಡಲಾಗಿದೆ. ಟ್ಯಾಕ್ಸಿ ಎಂದರೆ ಚಾಲಕ ಹೊರತುಪಡಿಸಿ ಆರು ಮಂದಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುಬಾರದು ಎಂಬ ಷರತ್ತು ವಿಧಿಸಲಾಗಿತ್ತು.
ಈ ಮಧ್ಯೆ ಅಧಿಕ ಶುಲ್ಕ ವಸೂಲಿ ಮಾಡುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಸಾರಿಗೆ ಆಯುಕ್ತರ ಕಚೇರಿ ಓಲಾ ಮತ್ತು ಉಬರ್ಗೆ ನೋಟಿಸ್ ಕಳುಹಿಸಿದೆ ಎಂದು ತಿಳಿದುಬಂದಿದೆ.
“ನೋಟಿಸ್ ಸ್ವೀಕರಿಸಿದ ದಿನಾಂಕದಿಂದ ಮೂರು ದಿನಗಳ ಗಡುವಿನೊಳಗೆ ಕಂಪನಿಗಳು ಪ್ರತಿಕ್ರಿಯಿಸಬೇಕು. ಅವರು ಉತ್ತರಿಸಲು ವಿಫಲವಾದರೆ ಮುಂದಿನ ವಾರದ ಅಂತ್ಯದೊಳಗೆ ಕ್ರಮ ತೆಗೆದುಕೊಳ್ಳಲಾಗುವುದು, ”ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಓಲಾ ಮತ್ತು ಉಬರ್ ಎರಡು ಕಿಲೋಮೀಟರ್ಗಿಂತ ಕಡಿಮೆ ದೂರವಿದ್ದರೂ ಕನಿಷ್ಠ 100 ರೂ. ವಿಧಿಸುತ್ತಿರುವ ಬಗ್ಗೆ ಹಲವಾರು ಪ್ರಯಾಣಿಕರು ಸಾರಿಗೆ ಇಲಾಖೆಗೆ ದೂರು ನೀಡಿದ್ದರು. ಇದಾದ ಬೆನ್ನಲ್ಲೇ ಇಲಾಖೆ ಈ ನೋಟಿಸ್ ಜಾರಿಗೊಳಿಸಿದೆ. ಬೆಂಗಳೂರಿನಲ್ಲಿ ಕನಿಷ್ಠ ಆಟೋ ದರ ಮೊದಲ 2 ಕಿಮೀಗೆ 30 ರೂ. ಇದ್ದು, ನಂತರದ ಪ್ರತಿ ಕಿಲೋಮೀಟರ್ಗೆ 15 ರೂ. ಇದೆ. ಆದರೆ ಆ್ಯಪ್ ಟ್ಯಾಕ್ಸಿಗಳು ಇದಕ್ಕಿಂತ ಹೆಚ್ಚಿನ ದರ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ದೂರಿದ್ದಾರೆ.
ಈ ನಿಟ್ಟಿನಲ್ಲಿ ಕಂಪನಿಗಳು ತಮ್ಮ ಆಟೋ ಸೇವೆಗಳನ್ನು ಆದಷ್ಟು ಬೇಗ ನಿಲ್ಲಿಸಬೇಕು ಹಾಗೂ ಟ್ಯಾಕ್ಸಿಗಳಲ್ಲಿಯೂ ಪ್ರಯಾಣಿಕರಿಗೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಶುಲ್ಕವನ್ನು ವಿಧಿಸಬಾರದು ಎಂದು ಇಲಾಖೆಯ ಸೂಚನೆ ನೀಡಿದೆ. ಆದೇಶ ಪಾಲಿಸಲು ವಿಫಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಇಲಾಖೆ ಎಚ್ಚರಿಸಿದೆ.