ಮಂಡ್ಯ: ಕಾಂಗ್ರೆಸ್ ಪಕ್ಷದ 50 ಶಾಸಕರ ಖರೀದಿಗೆ ಪ್ರಯತ್ನ ನಡೆಯುತ್ತಿದ್ದು, ಒಬ್ಬೊಬ್ಬರಿಗೆ 100 ಕೋಟಿ ರೂಪಾಯಿ ಆಫರ್ ನೀಡಿದ್ದಾರೆ ಎಂದು ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಈ ಕುರಿತು ಮಾತನಾಡಿದ ರವಿಕುಮಾರ್, ಬಿಜೆಪಿಯ ಬ್ರೋಕರ್‌ಗಳು ಪ್ರತಿನಿತ್ಯ ನಮ್ಮ ಶಾಸಕರನ್ನು ಸಂಪರ್ಕಿಸುತ್ತಿದ್ದಾರೆ. 50 ಕೋಟಿ ರೂಪಾಯಿಯಿಂದ 100 ಕೋಟಿ ರೂ.ವರೆಗೆ ಆಫರ್ ಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಫೋನ್ ಮಾಡಿ ಆಫರ್ ಮಾಡಿದ ಆಡಿಯೋ ಇದೆ. ಸರಿಯಾದ ಸಮಯದಲ್ಲಿ ರಿಲೀಸ್ ಮಾಡ್ತೀವಿ. ಆಪರೇಷನ್ ಕಮಲದ ಬಗ್ಗೆ ಮತ್ತಷ್ಟು ಎವಿಡೆನ್ಸ್ ಕಲೆ ಹಾಕ್ತಿದ್ದೀವಿ.
ಸಾಕ್ಷಿ ಸಮೇತ ಐಟಿ, ಇಡಿಗೆ ರೆಡ್ ಹ್ಯಾಂಡ್ ಆಗಿ ಹಿಡಿದು ಕೊಡ್ತೀವಿ ಎಂದು ರವಿಕುಮಾರ್ ಹೇಳಿದ್ದಾರೆ.
ಸಂತೋಷ್ ಜೀ, ಶೋಭಾ ಕರಂದ್ಲಾಜೆ, ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ ಎಲ್ಲಾ ಒಂದು ಗ್ಯಾಂಗ್ ಆಗಿದ್ದಾರೆ. ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ.
ಇವರೆಲ್ಲರೂ ನಮ್ಮ ಸರ್ಕಾರವನ್ನು ಬೀಳಿಸುವುದಾಗಿ ಪ್ರಧಾನಿ ಮೋದಿಗೆ ಮಾತು ಕೊಟ್ಟಿದ್ದಾರೆ. ನಮ್ಮದು 136 ಶಾಸಕರಿರುವ ಬಂಡೆಯಂತ ಸರ್ಕಾರ. ನಮ್ಮ ಶಾಸಕರು ಆಮಿಷಗಳಿಗೆ ಬಲಿಯಾಗಲ್ಲ. ಸರ್ಕಾರ ಕೆಡವಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.