ಬೆಂಗಳೂರು: ವಿವಾದಾತ್ಮಕ ಪೋಸ್ಟ್ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಚಿತ್ರನಟ, ಹೋರಾಟಗಾರ ಚೇತನ್ ಕುಮಾರ್ ವಿರುದ್ಧ ಶೇಷಾದ್ರಿಪುರಂ ಪೊಲೀಸರು ಸುಮೋಟೋ ಕೆಸು ದಾಖಲಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆಕ್ಷೇಪಾರ್ಹ ಟ್ವೀಟ್ ಮಾಡಿರುವ ಆರೋಪದ ಮೇರೆಗೆ ಚೇತನ್ ರಿಗೆ ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.
ಜಾಮೀನಿಗಾಗಿ ಚೇತನ್ ಪರ ವಕೀಲ ಕೆ. ಬಾಲನ್ ಅರ್ಜಿ ಸಲ್ಲಿಸಿದ್ದು, ಇಂದು ಆಕ್ಷೇಪಣೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಈ ಮಧ್ಯೆ, ಚೇತನ್ ಪತ್ನಿ ಮೇಘಾ ಪ್ರತಿಕ್ರಿಯೆ ನೀಡಿದ್ದು, ಚೇತನ್ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನಿಸುವ ಅವಕಾಶ ಎಲ್ಲರಿಗೂ ಇದೆ. ಪೊಲೀಸ್, ಜಡ್ಜ್, ಮೋದಿ ಯಾರೇ ಆಗಿರಲಿ ಪ್ರಶ್ನಿಸುವ ಅಧಿಕಾರವಿದೆ. ಯಾವುದೇ ಆಕ್ಷೇಪಾರ್ಹ ಪದಗಳನ್ನು ಬಳಸಿ ಚೇತನ್ ಮಾತನಾಡಿಲ್ಲ. ಚೇತನ್ ಜೊತೆ ಮಾತನಾಡಿದ್ದೇನೆ, ಆತ್ಮವಿಶ್ವಾಸದಿಂದಿದ್ದಾರೆ. ಬಂಧನದ ವಿರುದ್ಧವಾಗಿ ನಾವು ಕಾನೂನು ಹೋರಾಟ ಕೈಗೊಳ್ಳಲಿದ್ದೇವೆ ಎಂದಿದ್ದಾರೆ.
ನಟ ಚೇತನ್ ಫೆಬ್ರವರಿ 16ರಂದು ಟ್ವೀಟ್ ಮಾಡಿದ್ದು, ಅದರಲ್ಲಿ ಹಿಜಾಬ್ ವಿಚಾರವನ್ನು ಪ್ರಸ್ತಾಪಿಸುತ್ತಾ ಹೈಕೋರ್ಟ್ ನ್ಯಾಯಮೂರ್ತಿಗಳೊಬ್ಬರ ವಿರುದ್ಧ ವ್ಯಾಖ್ಯಾನ ಮಾಡಿದ್ದರು ಎನ್ನಲಾಗಿದೆ. ಇದರ ವಿರುದ್ಧ ಶೇಷಾದ್ರಿಪುರಂ ಪೊಲೀಸರು ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದರು. ಬಳಿಕ ಐಪಿಸಿ ಸೆಕ್ಷನ್ 505(2) ಮತ್ತು 504 ಅಡಿ ಎಫ್ಐಆರ್ ದಾಖಲಿಸಿದ್ದಾರೆ.
ಹಿರಿಯ ವಕೀಲರಾದ ಬಾಲನ್ ಅವರು ವಾದ ಮಂಡಿಸಿದರು.ಆ ನಂತರ, 8ನೇ ಎಸಿಎಂಎಂ ಕೋರ್ಟ್ ಅವರಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.
ಇದಾದ ಬಳಿಕ ಪೊಲೀಸರು ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರಕ್ಕೆ ಚೇತನ್ ಅವರನ್ನು ಕರೆತಂದರು. ನಂತರ ಅವರು ಜೈಲಿನಲ್ಲಿ ಇದ್ದು ಓದಲು ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದಿರುವ “Annihilation of cast” ಪುಸ್ತಕವನ್ನು ಪ್ರದರ್ಶಿಸಿದರು.