ಮೂರು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಅತಿಥೇಯ ಲಂಕಾ ವನಿತೆಯರು, ಹರ್ಮನ್‌ಪ್ರೀತ್ ಕೌರ್ ಸಾರಥ್ಯದ ಭಾರತ ತಂಡವನ್ನು 7 ವಿಕೆಟ್ ಅಂತರದಲ್ಲಿ ಭರ್ಜರಿಯಾಗಿ ಮಣಿಸಿದ್ದಾರೆ. ಆ ಮೂಲಕ ಕ್ಲೀನ್ ಸ್ವೀಪ್ ಅವಮಾನದಿಂದ ಪಾರಾಗಿದೆ.ಮತ್ತೊಂದೆಡೆ ಕೊನೆಯ ಪಂದ್ಯದಲ್ಲಿ ಸೋತರೂ ಸಹ, ಸರಣಿಯಲ್ಲಿ ಮೊದಲ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ ಟಿ20 ಸರಣಿಯನ್ನು ಗೆದ್ದು ಬೀಗಿದೆ.
ರಣಗಿರಿ ದಾಂಬುಲ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನಡೆದ ಸರಣಿಯ ಅಂತಿಮ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಭಾರತದ ಮಹಿಳಾ ತಂಡ 5 ವಿಕೆಟ್ ನಷ್ಟದಲ್ಲಿ 138 ರನ್‌ಗಳಿಸಿತ್ತು. ಸಾಮಾನ್ಯ ಗುರಿಯನ್ನು ಬೆನ್ನಟ್ಟಿದ ಲಂಕಾ, ಇನ್ನೂ ಮೂರು ಓವರ್ ಬಾಕಿ ಇರುವಂತೆಯೇ 3 ವಿಕೆಟ್ ನಷ್ಟದಲ್ಲಿ 141 ರನ್‌ಗಳಿಸುವ ಮೂಲಕ ಜಯಭೇರಿ ಭಾರಿಸಿತು. ತವರಿನ ಅಭಿಮಾನಿಗಳೆದುರು ಕನಿಷ್ಠ ಒಂದು ಪಂದ್ಯವನ್ನಾದರೂ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದ್ದ ಲಂಕಾ ತಂಡಕ್ಕೆ ನಾಯಕಿ ಚಮಾರಿ ಅಟ್ಟಪಟ್ಟು ಗೆಲುವಿನ ಉಡುಗೊರೆ ನೀಡಿದರು.
48 ಎಸೆತಗಳನ್ನು ಎದುರಿಸಿದ ನಾಯಕಿ, ಒಂದು ಸಿಕ್ಸರ್ ಮತ್ತು 14 ಬೌಂಡರಿಗಳ ನೆರವಿನಿಂದ 80 ರನ್‌ಗಳಿಸಿ ಅಜೇಯರಾಗುಳಿದರು. ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಅಟ್ಟಪಟ್ಟು ಪಾಲಾಯಿತು. ಉಳಿದಂತೆ ನೀಲಾಕ್ಷಿ ಡಿ ಸಿಲ್ವಾ 30 ರನ್ ಮತ್ತು ಹರ್ಷಿತಾ ಸಮರವಿಕ್ರಮ 13 ರನ್‌ಗಳಿಸಿದರು. ಭಾರತದ ಪರ ಬೌಲಿಂಗ್‌ನಲ್ಲಿ ರೇಣುಕಾ ಸಿಂಗ್ ಮತ್ತು ರಾಧಾ ಯಾದವ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಬೈಆಟ್ ಮಾಡಿದ್ದ ಭಾರತದ ಆಟಗಾರ್ತಿಯರು ನಿಧಾನಗತಿಯ ಬ್ಯಾಟಿಂಗ್ ಮೊರೆಹೋದ ಪರಿಣಾಮ ತಂಡ ಸಾಮಾನ್ಯ ಮೊತ್ತಕ್ಕೆ ಕುಸಿಯುವಂತಾಯಿತು. ಆರಂಭಿಕ ಸ್ಮೃತಿ ಮಂದಣ್ಣ 22 ರನ್ (21 ಎಸೆತ), ಶಬ್ಬಿನೇನಿ ಮೇಘನಾ 22 ರನ್ (26 ಎಸೆತ) ನಾಯಕಿ ಹರ್ಮನ್‌ಪ್ರೀತ್ ಕೌರ್ 39 ರನ್ (33 ಎಸೆತ) ಹಾಗೂ ಜೆಮಿನಾ ರೋಡ್ರಿಗಸ್ 30 ಎಸೆತಗಳಲ್ಲಿ 33 ರನ್ ಗಳಿಸಿದರು.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ಮುನ್ನ ಭಾರತ ವನಿತೆಯರ ತಂಡ ಲಂಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಜುಲೈ 1ರಂದು ಸರಣಿಯ ಮೊದಲ ಪಂದ್ಯ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.