ಒಡಿಶಾ ರೈಲು ದುರಂತ : ಆಸ್ಪತ್ರೆಯಲ್ಲಿ ಹೆಣಗಳ ರಾಶಿ, ಮೃತರ ಗುರುತು ಪತ್ತೆ ಹಚ್ಚಲು ಸಂಬಂಧಿಕರ ಹರಸಾಹಸ

Prasthutha|

ಭುವನೇಶ್ವರ: ಒಂದೆಡೆ ರಕ್ತದ ವಾಸನೆ, ಇನ್ನೊಂದೆಡೆ ಹೆಣಗಳ ರಾಶಿ, ಮೂಗು ಮುಚ್ಚಿಕೊಂಡು ಕಣ್ಣೀರು ಹಾಕುತ್ತಾ ತಮ್ಮವರ ಹುಡುಕಾಟದಲ್ಲಿರುವ ಜನರು. ಮುಖದ ತುಂಬಾ ರಕ್ತ, ಅಪಘಾತದಲ್ಲಾದ ಗಾಯಗಳಿಂದ ಗುರುತು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಯ ಶವಾಗಾರ ತುಂಬಿ ತುಳುಕುತ್ತಿದೆ. ಒಡಿಶಾ ತ್ರಿವಳಿ ರೈಲು ದುರಂತ ಸಂಭವಿಸಿ 52 ಗಂಟೆಗಳು ಕಳೆದಿವೆ. ಅಪಘಾತದಲ್ಲಿ ಮೃತಪಟ್ಟವರು 275 ಮಂದಿ, ಆಸ್ಪತ್ರೆಯಲ್ಲಿ 56 ಮಂದಿ ಸ್ಥಿತಿ ಚಿಂತಾಜನಕವಾಗಿದೆ. ಸಾವಿರಕ್ಕೂ ಅಧಿಕ ಮಂದಿ ಗಂಭೀರ ಗಾಯಗಳಿಂದ ನರಳುತ್ತಿದ್ದಾರೆ.

- Advertisement -

ಮೊದಲು ಸಂಬಂಧಿಕರಿಗೆ ತಮ್ಮವರು ಬದುಕಿರಬಹುದಾ ಎನ್ನುವ ಭರವಸೆ ಇದ್ದರೂ, ಯಾವುದೇ ದಾಖಲೆ ಇಲ್ಲದ ಕಾರಣ ಹೆಣಗಳ ರಾಶಿಗಳಲ್ಲಿ ತಮ್ಮವರನ್ನು ಹುಡುಕಾಡಲೇ ಬೇಕಿದೆ. ಕೆಲವೊಂದು ಶವಗಳು ಬೆಂಕಿಯಲ್ಲಿ ಬೆಂದು ಹೋಗಿವೆ, 100 ಕ್ಕೂ ಹೆಚ್ಚು ಮೃತ ದೇಹಗಳನ್ನು ಭುವನೇಶ್ವರದ ಏಮ್ಸ್‌ಗೆ ರವಾನಿಸಲಾಗಿದ್ದು, ವಿಧಿವಿಜ್ಞಾನ ಪ್ರಯೋಗದ ಮೂಲಕ ಪತ್ತೆಹಚ್ಚಲು ಪ್ರಯತ್ನ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಕೇವಲ 88 ಮೃತ ದೇಹಗಳನ್ನು ಮಾತ್ರ ಗುರುತಿಸಲಾಗಿದೆ.

ಇದುವರೆಗೆ 88 ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಗಾಯಗೊಂಡ 793 ಪ್ರಯಾಣಿಕರನ್ನು ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ತೀವ್ರವಾಗಿ ಗಾಯಗೊಂಡ 382 ಪ್ರಯಾಣಿಕರ ಚಿಕಿತ್ಸೆ ಇನ್ನೂ ನಡೆಯುತ್ತಿದೆ.

- Advertisement -

ಕೋಲ್ಡ್‌ ಸ್ಟೋರೇಜ್‌ ಶವಾಗಾರವು ಗರಿಷ್ಠ 40 ಶವಗಳನ್ನಿಡುವ ಸಾಮರ್ಥ್ಯ ಹೊಂದಿದ್ದು ಸದ್ಯ ಮೃತದೇಹಗಳನ್ನಿಡುವುದೇ ಸವಾಲಾಗಿದೆ ಎಂದು ಭುವನೇಶ್ವರ ಜಿಲ್ಲಾ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಕುಟುಂಬಸ್ಥರು ಬಂದು ಶವಗಳನ್ನು ಗುರುತಿಸುವವರೆಗೂ ರಸಾಯನಿಕಗಳ ಮೂಲಕ ಶವಗಳನ್ನು ಸಂರಕ್ಷಿಸಲಾಗುವುದು. ಈ ಬೇಸಿಗೆಯಲ್ಲಿ ಶವಸಂರಕ್ಷಣೆ ನಿಜಕ್ಕೂ ಕಷ್ಟಕರ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp