ಬೆಂಗಳೂರು: ಒಡಿಶಾದ ಬಾಲಸೋರ್ ಜಿಲ್ಲೆ ಬಹನಾಗ ಬಳಿ ಸಂಭವಿಸಿದ ರೈಲು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲಿನಲ್ಲಿದ್ದ ಕರ್ನಾಟಕದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಕರ್ನಾಟಕದಿಂದ ಹೋಗಿರುವ ರೈಲಿಗೂ ಸಹ ಹಾನಿಯಾಗಿದೆ. 23 ರೈಲ್ವೆ ಬೋಗಿಗಳ ಪೈಕಿ 3 ಬೋಗಿಗೆ ಮಾತ್ರ ಹಾನಿಯಾಗಿದೆ. ಹಾನಿಯಾದ ಬೋಗಿಯಲ್ಲಿ ಕರ್ನಾಟಕದವರು ಇದ್ದ ಮಾಹಿತಿ ಇಲ್ಲ. ನಿನ್ನೆಯಿಂದಲೂ ರೈಲ್ವೆ ಇಲಾಖೆ ಅಧಿಕಾರಿಗಳು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ರೈಲ್ವೆ ಡಿಐಜಿ ಶಶಿಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ನಾಲ್ಕು ಕಡೆ ಹೆಲ್ಪ್ಲೈನ್ ಪ್ರಾರಂಭ ಮಾಡಿದ್ದೇವೆ. ರಾಜ್ಯದ ಪ್ರಯಾಣಿಕರು ಮೃತಪಟ್ಟ, ಗಾಯಗೊಂಡಿರುವ ಬಗ್ಗೆ ಮಾಹಿತಿ ಇಲ್ಲ. ಕರ್ನಾಟಕದ ಪ್ರಯಾಣಿಕರು ಇದ್ದ ಬೋಗಿಗೆ ಯಾವ ತೊಂದರೆಯಾಗಿಲ್ಲ. ಕರ್ನಾಟಕದ ಯಾವ ಪ್ರಯಾಣಿಕರಿಗೆ ಏನು ಆಗಿಲ್ಲ ಘಟನಾ ಸ್ಥಳಕ್ಕೆ ರಾಜ್ಯದಿಂದ ಡಿವೈಎಸ್ಪಿ, ಅಧಿಕಾರಿಗಳನ್ನು ಕಳಿಸಲಾಗುತ್ತದೆ ಎಂದರು.
ನಾಲ್ಕು ಹೆಲ್ಪ್ ಡೆಸ್ಕ್ ಪ್ರಾರಂಭ ಮಾಡಿದ್ದೇವೆ ಆದರೆ ಯಾವ ಕರೆಯೂ ಬಂದಿಲ್ಲ. ಟಿಕೆಟ್ ಹಣ ರೀಫಂಡ್ ಮಾಡಲಾಗುತ್ತಿದೆ. ಸಾವಿನ ಬಗ್ಗೆ ಸುಳ್ಳು ಸುದ್ದಿ ಬೇಡ. ಯಾರು ಕೂಡ ಇದುವರೆಗೆ ಸಾವನಪ್ಪಿರವ ಮಾಹಿತಿ ಇಲ್ಲ. ಭಾರತದ ನಾರ್ತ್ ಈಸ್ಟ್ ಭಾಗದ ಒಂದಷ್ಟು ಜನರು ಮೃತರಾಗಿದ್ದ ಬಗ್ಗೆ ಮಾಹಿತಿ ಇದೆ ಎಂದು ಮಾಹಿತಿ ನೀಡಿದರು. ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 280ಕ್ಕೆ ಏರಿಕೆಯಾಗಿದ್ದು, 900ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.