ದೋಹಾ: ಕಳೆದ ವರ್ಷ ಅಕ್ಟೋಬರ್ 7ರಂದು ನಡೆಸಿದ ದಾಳಿಯು ಇಸ್ರೇಲ್ ಅನ್ನು ಶೂನ್ಯಕ್ಕಿಳಿಸಿದೆ ಎಂದು ಹಮಾಸ್ ನ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಇಸ್ರೇಲ್ ಮೇಲಿನ ದಾಳಿಗೆ ಒಂದು ವರ್ಷ ತುಂಬಿದ ದಿನದಂದೇ ಅವರಿಂದ ಈ ಹೇಳಿಕೆ ಹೊರಬಿದ್ದಿದೆ. ಆ ದಾಳಿಯೇ ಗಾಜಾದಲ್ಲಿ ಯುದ್ಧಕ್ಕೆ ಮುನ್ನುಡಿ ಬರೆದಿತ್ತು.
‘ಅಲ್ ಅಕ್ಸಾ ಫ್ಲಡ್ (ಕಾರ್ಯಾಚರಣೆಯ ಹೆಸರು) ಇಸ್ರೇಲ್ ಅನ್ನು ಶೂನ್ಯಕ್ಕಿಳಿಸಿದ್ದು ಮಾತ್ರವಲ್ಲದೆ, ಅದರ ಅಸ್ತಿತ್ವಕ್ಕೂ ಬೆದರಿಕೆಯೊಡ್ಡಿದೆ’ ಎಂದು ಹಮಾಸ್ ಸಂಘಟನೆಯ ಮಾಜಿ ಮುಖ್ಯಸ್ಥ ಖಾಲಿದ್ ಮೆಶಾಲ್, ಅಲ್ ಅರಬಿಯಾ ಟಿ.ವಿ. ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ.
‘ಅಲ್-ಅಕ್ಸಾ ಕಬಳಿಸಲು ಹಾಗೂ ಆಕ್ರಮಿಸಲು ಇಸ್ರೇಲ್ ಮಾಡುತ್ತಿರುವ ತೀವ್ರಗತಿಯ ಯೋಜನೆಗಳಿಗೆ ಆ ದಾಳಿ ಸಹಜ ಪ್ರತಿಕ್ರಿಯೆಯಾಗಿತ್ತು’ ಎಂದು ಅವರು ಹೇಳಿದ್ದಾರೆ. ಅಲ್ಲದೆ ದೀರ್ಘಕಾಲಿನ ಶಾಂತಿ ಒಪ್ಪಂದದ ಹೊರತಾಗಿಯೂ ಇಸ್ರೇಲ್, ಈಜಿಪ್ಟ್ ಹಾಗೂ ಜೋರ್ಡಾನ್ ಗೂ ಬೆದರಿಕೆಯೊಡ್ಡುತ್ತಿದೆ’ ಎಂದಿದ್ದಾರೆ.