ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಯು. ಯು. ಲಲಿತ್ ಅವರು ತಮ್ಮ ಕರ್ತವ್ಯದ ಕೊನೆಯ ದಿನವಾದ ಸೋಮವಾರ ವೃತ್ತಿಗೆ ವಿದಾಯ ಹೇಳಿದರು.
ತಮ್ಮ ವಕೀಲ ವೃತ್ತಿಯಲ್ಲಿ ಎದುರಾದ ವಿಶಿಷ್ಟ ಸನ್ನಿವೇಶವೊಂದನ್ನು ಅವರು ಈ ಸಂದರ್ಭದಲ್ಲಿ ಬಹಿರಂಗಪಡಿಸಿದರು.
ಸುಪ್ರೀಂ ಕೋರ್ಟ್ ವಕೀಲರಾಗಿ ನ್ಯಾ. ಲಲಿತ್ ಅವರ ಯಾನ 1980ರ ದಶಕದಲ್ಲಿ ಅಂದಿನ ಸಿಜೆಐ ವೈ ವಿ ಚಂದ್ರಚೂಡ್ ಅವರೆದುರು ಪ್ರಕರಣವೊಂದನ್ನು ಪ್ರಸ್ತಾಪಿಸುವ ಮೂಲಕ ಆರಂಭವಾಯಿತು. ಈಗ ಅದೇ ನ್ಯಾ. ವೈ ವಿ ಚಂದ್ರಚೂಡ್ ಅವರ ಪುತ್ರ ನ್ಯಾ. ಡಿ ವೈ ಚಂದ್ರಚೂಡ್ ಅವರಿಗೆ ಅಧಿಕಾರ ದಂಡವನ್ನು ಅವರು ವರ್ಗಾಯಿಸುತ್ತಿದ್ದಾರೆ. ಈ ವಿಶಿಷ್ಟ ಕಾಕತಾಳೀಯತೆಯನ್ನು ಅವರು ನೆನೆದರು.
“ಈ ನ್ಯಾಯಾಲಯದಲ್ಲಿ ನನ್ನ ಯಾನ ಕೋರ್ಟ್ ನಂ. 1 ರಲ್ಲಿ ವಾದಿಸುವ ಮೂಲಕ ಪ್ರಾರಂಭವಾಯಿತು. ನಾನು ಬಾಂಬೆಯಲ್ಲಿ ಪ್ರಕರಣವೊಂದರ ವಾದದಲ್ಲಿ ತೊಡಗಿದ್ದೆ, ತರುವಾಯ ಅದೇ ಪ್ರಕರಣವನ್ನು ಇಲ್ಲಿ ಸಿಜೆಐ ವೈ ವಿ ಚಂದ್ರಚೂಡ್ ಅವರ ಮುಂದೆ ಪ್ರಸ್ತಾಪಿಸಲು ಬಂದೆ. ಇಲ್ಲಿಗೆ ನನ್ನ ಯಾನ ಕೊನೆಗೊಳ್ಳುತ್ತಿದೆ. ನಾನು ಈಗ ಅವರ ಮಗ ಮತ್ತು ಪ್ರಖ್ಯಾತ ನ್ಯಾಯಶಾಸ್ತ್ರಜ್ಞ (ನ್ಯಾ. ಡಿ ವೈ ಚಂದ್ರಚೂಡ್) ಅವರಿಗೆ ಅಧಿಕಾರ ಹಸ್ತಾಂತರಿಸುತ್ತಿದ್ದೇನೆ” ಎಂದು ಸಿಜೆಐ ಲಲಿತ್ ಹೇಳಿದರು.
ಸಿಜೆಐ ಲಲಿತ್ ಅವರು ನಾಳೆ ನಿವೃತ್ತರಾಗಲಿದ್ದಾರೆ ಆದರೆ ಗುರುನಾನಕ್ ಜಯಂತಿಯ ನಿಮಿತ್ತ ನ್ಯಾಯಾಲಯ ತೆರೆಯುವುದಿಲ್ಲ. ಹೀಗಾಗಿ ಭಾವಿ ಸಿಜೆಐ ಡಿ ವೈ ಚಂದ್ರಚೂಡ್, ನ್ಯಾ. ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ಔಪಚಾರಿಕ ಪೀಠದ ಕಲಾಪದ ವೇಳೆ ಕಾನೂನು ಅಧಿಕಾರಿಗಳು, ಹಿರಿಯ ನ್ಯಾಯವಾದಿಗಳು ಹಾಗೂ ವಕೀಲರು ಅವರನ್ನು ಬೀಳ್ಕೊಡಲು ಸಾಲುಗಟ್ಟಿ ನಿಂತರು.
(ಕೃಪೆ: ಬಾರ್ & ಬೆಂಚ್)