ತಲಶ್ಶೇರಿ: ರೈಲು ಹತ್ತುವಾಗ ಕೆಳಗೆ ಬಿದ್ದ ನರ್ಸ್ ಕಾಲು ತುಂಡಾದ ಘಟನೆ ನಡೆದಿದೆ.
ಪಯ್ಯಾವೂರು ಉಳಿಕ್ಕಲ್ ಕರಪಳಕ್ಕಿಲ್ ಹೌಸ್ ನ ಮಿನಿ ಜೋಸೆಫ್ (47) ಎಂಬವರ ಎಡಗಾಲಿನ ಪಾದ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿಕೊಂಡು ತುಂಡಾಗಿದೆ.
ಬುಧವಾರ ಬೆಳಗ್ಗೆ 7.15ಕ್ಕೆ ತಲಶ್ಶೇರಿ ನಿಲ್ದಾಣದಲ್ಲಿ ಮುಂಬೈ-ತಿರುವನಂತಪುರಂ ನೇತ್ರಾವತಿ ಎಕ್ಸ್‌ಪ್ರೆಸ್‌ನ ಕಂಪಾರ್ಟ್‌ಮೆಂಟ್ ಬದಲಾಯಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ತಾವು ಕೆಲಸ ಮಾಡುತ್ತಿದ್ದ ತಿರೂರಿನಲ್ಲಿರುವ ಆಸ್ಪತ್ರೆಗೆ ಹೋಗುತ್ತಿದ್ದಾಗ ಅವಘಡ ಸಂಭವಿಸಿದ್ದು, ತನ್ನ ಪತಿ ಮತ್ತು ಮಗಳೊಂದಿಗೆ ಅವರು ಪ್ರಯಾಣಿಸುತ್ತಿದ್ದರು.
ತಕ್ಷಣ ತಲಶ್ಶೇರಿ ಜನರಲ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.