►ಹಿಜಾಬ್ ಗೆ ಅವಕಾಶವಿರುವ ಶಿಕ್ಷಣ ಸಂಸ್ಥೆಗಳತ್ತ ಮುಸ್ಲಿಮ್ ಹುಡುಗಿಯರ ವಲಸೆ
ಬೆಂಗಳೂರು: ಕಳೆದ 15 ವರ್ಷಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಕಾಲೇಜು ಸೇರುವ ಮುಸ್ಲಿಮ್ ಹುಡುಗಿಯರ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಈಗ ಹಿಜಾಬ್ ಅಥವಾ ಶಿಕ್ಷಣ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಿ ಎಂಬವರು ಮುಸ್ಲಿಮ್ ಹುಡುಗಿಯರ ಕಲಿಕೆಗೆ, ಅವರ ಸಬಲೀಕರಣಕ್ಕೆ ತೊಡರುಗಾಲಾಗಿದ್ದಾರೆ. ಈ ವರ್ಷ ಕರ್ನಾಟಕವನ್ನು ಅಲುಗಾಡಿಸಿದ ಮುಖ್ಯ ವಿಷಯ ಹಿಜಾಬ್ ಆಗಿದ್ದು, ಅದು ಹೆಚ್ಚು ಹೊಟ್ಟೆಕಿಚ್ಚಿನದಾಗಿ ದುಷ್ಪರಿಣಾಮ ಬೀರಿದ್ದು ಉಡುಪಿ ಜಿಲ್ಲೆಯಲ್ಲಿ.
ಇದೇ ವಿಷಯವನ್ನು ದೊಡ್ಡದು ಮಾಡಿದ ಹಿಂದುತ್ವ ಶಕ್ತಿಗಳು ಅದನ್ನು ದುರುಪಯೋಗಿಸಿಕೊಂಡು ಮುಸ್ಲಿಮ್ ಹುಡುಗಿಯರಿಗೆ ಹಿಜಾಬ್ ಮುಖ್ಯವೇ ಹೊರತು ಓದುವುದರಲ್ಲಿ ಆಸಕ್ತಿ ಇಲ್ಲ ಎಂದು ಅಪಪ್ರಚಾರ ಮಾಡಿದರು. ಆದರೆ ಟಿಎನ್ ಎಂ ಅಂಕಿ ಅಂಶಗಳ ಸಂಗ್ರಹದಂತೆ ಕಳೆದ ಎರಡು ದಶಕಗಳಿಂದ ಉಡುಪಿ ಜಿಲ್ಲೆಯಲ್ಲಿ ಮುಸ್ಲಿಮ್ ಹುಡುಗಿಯರು ಹೆಚ್ಚೆಚ್ಚು ಉನ್ನತ ಶಿಕ್ಷಣ ಕಲಿಕೆಗೆ ಸೇರಿಕೊಳ್ಳುತ್ತಿದ್ದಾರೆ ಎಂಬುದು ಬಹಿರಂಗವಾಗಿದೆ.
ಉಡುಪಿ ಜಿಲ್ಲೆಯಲ್ಲಿ ಕಳೆದ 15 ವರ್ಷಗಳಲ್ಲಿ ಪಿಯುಸಿಗೆ ಸೇರುವ ಮುಸ್ಲಿಮ್ ವಿದ್ಯಾರ್ಥಿನಿಯರ ಸಂಖ್ಯೆಯು ದುಪ್ಪಟ್ಟಾಗಿದೆ. ಇದನ್ನು ಅಧಿಕೃತವಾಗಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ- ಡಿಡಿಪಿಯು ಇದನ್ನು ಖಚಿತಪಡಿಸಿದೆ. ಇದರ ನಡುವೆ ಬಹುತೇಕ ಖಾಸಗಿ ಮತ್ತು ಎಲ್ಲ ಸರಕಾರಿ ಶಾಲೆಗಳಲ್ಲಿ ಹಿಜಾಬ್ ಗೆ ನಿಷೇಧ ಹೇರಲಾಯಿತು. ಈ ಹಿಜಾಬ್ ನಿಷೇಧ ನಿಯಮದಿಂದಾಗಿ ಮುಸ್ಲಿಮ್ ಹುಡುಗಿಯರ ಶಿಕ್ಷಣಕ್ಕೆ ಪೆಟ್ಟು ಬೀಳುವುದನ್ನು ತಜ್ಞರು ಗುರುತಿಸಿದ್ದಾರೆ. ಅದರ ಮೊದಲ ಸೂಕ್ಷ್ಮ ಗೋಚರ ಆಗಿರುವುದಾಗಿಯೂ ತಜ್ಞರು ಕಂಡುಕೊಂಡಿದ್ದಾರೆ.
“ಇದು ಉಡುಪಿ ಜಿಲ್ಲೆಯಲ್ಲಿ ಭವಿಷ್ಯದಲ್ಲಿ ಮುಸ್ಲಿಮ್ ಹುಡುಗಿಯರ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ ಬೀರುತ್ತದೆ” ಎನ್ನುತ್ತಾರೆ ಉಡುಪಿ ಜಿಲ್ಲೆಯ ಮುಸ್ಲಿಮ್ ಒಕ್ಕೂಟದ ಹಿರಿಯ ಸದಸ್ಯರಾದ ಇದ್ರೀಸ್ ಹೂಡೆ.
“ಕಳೆದ 20 ವರುಷಗಳಿಂದ ಮುಸ್ಲಿಂ ಹುಡುಗಿಯರು ಹೆಚ್ಚೆಚ್ಚು ಶಿಕ್ಷಣದಲ್ಲಿ ತೊಡಗಿಕೊಳ್ಳುವಂತೆ ಉತ್ತೇಜನ ನೀಡಲಾಗಿದೆ. ಈಗ ನಾವು ಮತ್ತೆ ಇದೆಲ್ಲವನ್ನೂ ಆರಂಭದಿಂದಲೇ ಮಾಡಬೇಕಾಗಿದೆ” ಎನ್ನುತ್ತಾರೆ ಇದ್ರೀಸ್.
ಅಂಕಿ ಅಂಶ ಹೇಳುವುದೇನು?
ಉಡುಪಿ ಜಿಲ್ಲೆ ಡಿಡಿಪಿಐ ಕಚೇರಿ ಒಗ್ಗೂಡಿಸಿದ ಅಂಕಿ ಅಂಶದಂತೆ ಜಿಲ್ಲೆಯಲ್ಲಿ ಪಿಯುಸಿ ಸೇರುವ ಮುಸ್ಲಿಮ್ ವಿದ್ಯಾರ್ಥಿನಿಯರ ಸಂಖ್ಯೆಯು 2005ರಿಂದ ನಿರಂತರ ಏರುಗತಿಯಲ್ಲಿದೆ. 2005ರಲ್ಲಿ ಜಿಲ್ಲೆಯಲ್ಲಿ 674 ಮುಸ್ಲಿಮ್ ಹುಡುಗಿಯರು ಪಿಯು ಕಾಲೇಜು ಸೇರಿದ್ದರು. 2010ರಲ್ಲಿ ಆ ಸಂಖ್ಯೆಯು 943ಕ್ಕೆ, 2015ರಲ್ಲಿ 1,169ಕ್ಕೆ, 2021ರಲ್ಲಿ 1,446ಕ್ಕೇ ಏರಿಕೆ ಕಂಡಿದೆ.
2007 ಮತ್ತು 2018ರ ನಡುವೆ ದೇಶಾದ್ಯಂತ ಮುಸ್ಲಿಮ್ ಹೆಣ್ಣು ಮಕ್ಕಳ ಜಿಎಆರ್ ಒಟ್ಟು ಹಾಜರಾತಿ ಪ್ರಮಾಣವು 6.7%ದಿಂದ 13.5%ಕ್ಕೆ ಜಿಗಿದಿದೆ. ಇದು ರಾಷ್ಟ್ರೀಯ ಮಾದರಿ ಸರ್ವೇಕ್ಷಣೆ -ಎನ್ ಎಸ್ ಎಸ್ ವಿವರ ಎನ್ನುತ್ತಾರೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ದಲಿತ್ ಸ್ಟಡೀಸ್ ನ ಖಾಲಿದ್ ಖಾನ್.
“ಈ ಸಂಖ್ಯೆ ಅಚ್ಚರಿಯದೇನಲ್ಲ. ಉಡುಪಿ ಜಿಲ್ಲೆಯಲ್ಲಿ ಮುಸ್ಲಿಮ್ ಹುಡುಗಿಯರು ಓದಿನತ್ತ ಆಕರ್ಷಿತರಾಗುವಂತೆ ಗಟ್ಟಿ ಪ್ರಯತ್ನಗಳನ್ನು ಮಾಡಲಾಗಿದೆ. ಇದರ ನಡುವೆ ಹಿಜಾಬ್ ಗೊಂದಲದ ಕಾಲದಲ್ಲಿ ಮಾಧ್ಯಮಗಳು ಬೇಕೆಂದೇ ಮುಸ್ಲಿಮ್ ಹುಡುಗಿಯರಿಗೆ “ಶಿಕ್ಷಣ ಬೇಕೆ, ಹಿಜಾಬ್ ಬೇಕೆ” ಎಂಬ ಪ್ರಶ್ನೆಯನ್ನು ಯಾವುದೇ ಅಧ್ಯಯನ ಇಲ್ಲದೆ ಮತ್ತೆ ಮತ್ತೆ ಎತ್ತಿದ್ದರು” ಎನ್ನುತ್ತಾರೆ ಇದ್ರೀಸ್ ಹೂಡೆ.
ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಸುಧಾರಿಸಿರುವುದು ಇದಕ್ಕೆ ಮುಖ್ಯ ಕಾರಣ ಎನ್ನುವ ಇದ್ರೀಸ್ ರ ಅಭಿಪ್ರಾಯವನ್ನು ಕಾರ್ಕಳ ಮೂಲದ ಈಗ ಕತಾರ್ ನಲ್ಲಿ ವಕೀಲೆ ಆಗಿರುವ ವಫಾ ಸುಲ್ತಾನಾ ಅನುಮೋದಿಸುತ್ತಾರೆ. ಈ ಪ್ರದೇಶದಲ್ಲಿ ಹಿಜಾಬ್ ಹೋರಾಟ ತೀವ್ರವಾಗಿತ್ತು.
“1990ರಲ್ಲಿ ಹುಟ್ಟಿದ ಕರಾವಳಿಯ ಬಹಳಷ್ಟು ಮುಸ್ಲಿಮ್ ವಿದ್ಯಾರ್ಥಿನಿಯರು 2010ರಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ಇರುವುದು ಸ್ಪಷ್ಟ” ಎನ್ನುತ್ತಾರೆ ವಫಾ.
ಈ ಪ್ರವೃತ್ತಿ ಹೆಚ್ಚಲು ಕರಾವಳಿಯ ಮುಸ್ಲಿಮ್ ಕುಟುಂಬಗಳು ಕೊಲ್ಲಿ ದೇಶಗಳಿಗೆ ವಲಸೆ ಹೋಗಿರುವುದು ಅತಿ ಮುಖ್ಯ ಕಾರಣ. “ಕೊಲ್ಲಿ ವಲಸೆಯ ಕಾರಣಕ್ಕೆ ಮುಸ್ಲಿಮರ ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನ ಸುಧಾರಿಸಿರುವುದು ಇಲ್ಲಿ ಮುಖ್ಯ. ಅಲ್ಲದೆ ಮುಸ್ಲಿಮರು ನಡೆಸುವ ಶಿಕ್ಷಣ ಸಂಸ್ಥೆಗಳು ಅಧಿಕವಾಗಿದ್ದು, ಅವರೂ ಮುಸ್ಲಿಮ್ ಕಲಿಕೆಗೆ ಒತ್ತು ನೀಡುತ್ತಿದ್ದಾರೆ” ಎಂದರು ಅವರು ವಿಶ್ಲೇಷಿಸುತ್ತಾರೆ.
ಕರಾವಳಿ ಕರ್ನಾಟಕವು ಅತಿ ಮುಖ್ಯ ಶಿಕ್ಷಣ ವಲಯವಾಗಿದ್ದು ಉಡುಪಿ ಜಿಲ್ಲೆಯಲ್ಲಿ ಮುಸ್ಲಿಮ್ ಜನಸಂಖ್ಯೆ 8.22% ಇದೆ. 21ನೇ ಶತಮಾನದ ಆರಂಭದಲ್ಲಿ ಅಲ್ಲೆಲ್ಲೂ ಪಿಯುಸಿ ಕಲಿಯಲು ಮುಸ್ಲಿಮರದೇ ಕಾಲೇಜುಗಳು ಇರಲಿಲ್ಲ. ಕರ್ನಾಟಕದ ಇತರ ಪ್ರದೇಶಗಳಂತೆ ಉಡುಪಿ ಜಿಲ್ಲೆಯಲ್ಲೂ ಕ್ರಿಶ್ಚಿಯನ್ ಮಿಶನರಿಗಳು ಶಿಕ್ಷಣಕ್ಕೆ ಅಡಿಪಾಯ ಹಾಕಿದ್ದು ಅದು ಅನುಕೂಲಕರವೇ ಆಗಿತ್ತು. ಇಂಗ್ಲಿಷ್ ಕಲಿಯುವ ಬೇಡಿಕೆ ಹೆಚ್ಚಾದ್ದರಿಂದ 20ನೇ ಶತಮಾನದ ಕೊನೆಯರ್ಧದಲ್ಲಿ ಸಾಕಷ್ಟು ಕಾಸಗಿ ಶಾಲೆಗಳು ಹುಟ್ಟಿಕೊಂಡವು.
2001ರಲ್ಲಿ ರಿಯಲ್ ಎಸ್ಟೇಟ್ ಮತ್ತು ಕಾಂಟ್ಯಾಕ್ಟರ್ ಸೈಯದ್ ಮುಹಮ್ಮದ್ ಬ್ಯಾರಿ ಕುಟುಂಬದವರು ಕುಂದಾಪುರದ ಕೋಡಿಯಲ್ಲಿ ಮೊದಲ ಪದವಿಪೂರ್ವ ಕಾಲೇಜು ತೆರೆದರು. 2010ರ ಹೊತ್ತಿಗೆ ಮುಸ್ಲಿಮರು ನಡೆಸುವ ಪಿಯು ಕಾಲೇಜುಗಳ ಸಂಖ್ಯೆಯು ನಾಲ್ಕಕ್ಕೇರಿತು. ಸಾಮಾಜಿಕ ಆರ್ಥಿಕ ಬೆಳವಣಿಗೆ ಮತ್ತು ಕಾಳಜಿಯು ಇದಕ್ಕೆ ಕಾರಣವಾಯಿತು ಎನ್ನುತ್ತಾರೆ ಅಸ್ಲಾಂ ಹೈಕಾಡಿ. ಹೂಡೆಯ ಸಾಲಿಹಾತ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಇವರು.
ಹೂಡೆಯಲ್ಲಿ ಸಾಲಿಹಾತ್ ಪಿಯು ಕಾಲೇಜು, ಮೂಳೂರಿನಲ್ಲಿ ಅಲ್ ಇಹ್ಸಾನ್ ಪಿಯು ಕಾಲೇಜು, ಗಂಗೊಳ್ಳಿಯಲ್ಲಿ ತೌಹಿದ್ ಪಿಯು ಕಾಲೇಜುಗಳು 2005-2010ರ ನಡುವೆ ಆರಂಭ ಆದವು. ಇವು ತುಂಬ ಪರಿಣಾಮ ಬೀರಿ ಮುಸ್ಲಿಮ್ ಹುಡುಗಿಯರು ಎಸ್ ಎಸ್ ಎಲ್ ಸಿಗೆ ಶಾಲೆ ತೊರೆಯುವುದು ತೀರಾ ಕಡಿಮೆ ಮಾಡಿತು ಎಂದರು ಅಸ್ಲಾಂ.
ಈ ಮೂರು ಕಾಲೇಜುಗಳು ಮುಸ್ಲಿಮ್ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸಿದವು. ಗಂಡು ಹುಡುಗರನ್ನು ಸೇರಿಸಿಕೊಳ್ಳಲಿಲ್ಲ. ಹೂಡೆಯ ಸಾಲಿಹಾತ್ ಕಾಲೇಜಿನಲ್ಲಿ 2010ರಲ್ಲಿ ಪಿಯುಸಿ ಓದುತ್ತಿದ್ದ ಮುಸ್ಲಿಮ್ ಹುಡುಗಿಯರ ಸಂಖ್ಯೆ 59 ಇದ್ದುದು ಈಗ 79ಕ್ಕೆ ಏರಿದೆ. “ನಮ್ಮ ಶಿಕ್ಷಣ ಸಂಸ್ಥೆ ಆರಂಭವಾದಾಗಿನಿಂದ ಹುಡುಗಿಯರ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದೇವೆ” ಎನ್ನುತ್ತಾರೆ ಅಸ್ಲಾಂ.
“ಮುಸ್ಲಿಮ್ ಹುಡುಗಿಯರು ಕಲಿಕೆ ಮತ್ತಿತರ ಚಟುವಟಿಕೆಗಳಲ್ಲಿ ಮುಂದಿದ್ದು ಅವರ ಸಾಧನೆಗಳು ಮುಖ್ಯವಾಗಿ ಮುಸ್ಲಿಮರು ನಡೆಸುವ ಪತ್ರಿಕೆಗಳಲ್ಲಿ ಬರುತ್ತಿವೆ. ಇದು ಹೆತ್ತವರು ತಮ್ಮ ಹೆಣ್ಣು ಮಕ್ಕಳನ್ನು ಉನ್ನತ ಕಲಿಕೆಗೆ ಸೇರಿಸುವಂತೆ ಪ್ರೇರೇಪಿಸಿದೆ” ಎಂದು ವಫಾ ಹೇಳುತ್ತಾರೆ.
ಪಿಯುಸಿ ಬಳಿಕ ವಿಶ್ವವಿದ್ಯಾನಿಲಯಕ್ಕೆ ಧಾವಿಸುತ್ತಿರುವ ಮುಸ್ಲಿಮ್ ಹೆಣ್ಣು ಮಕ್ಕಳು ಉತ್ತಮ ಕೆಲಸಗಳನ್ನೂ ಪಡೆಯುತ್ತಿದ್ದಾರೆ. ಇವೆಲ್ಲ ಹಿಂದೆ ಅಲಭ್ಯವಿತ್ತು. “ಈಗೀಗ ತಾಂತ್ರಿಕ ಪದವಿಗಳನ್ನು ಪಡೆಯುವಲ್ಲೂ ಮುಸ್ಲಿಂ ಮಹಿಳೆಯರು ಮುಂದಿದ್ದಾರೆ. ಹಿಜಾಬ್ ಹರ್ಡಲ್ಸ್ ಎದುರಾದರೂ ಮುಸ್ಲಿಮ್ ಹುಡುಗಿಯರು ಮನೆಯಲ್ಲೇ ಕೂರುವುದು ತುಂಬ ಕಡಿಮೆಯಾಗಿದೆ.” ಎಂದು ಇದ್ರೀಸ್ ಹೂಡೆ ಹೇಳಿದರು.
ಕರಾವಳಿ ಕರ್ನಾಟಕದಲ್ಲಿ ಹಿಜಾಬ್ ಧರಿಸಿದ ಹುಡುಗಿಯರನ್ನು ಕಾಲೇಜುಗಳು ದೂರ ದೂಡುವುದು ಹೊಸ ವಿಷಯವಲ್ಲ. ಈ ವಿಷಯದಲ್ಲಿ ಹಿಂದೆ ಬಂಟ್ವಾಳದ ಎಸ್ ವಿಎಸ್ ಕಾಲೇಜು, ಉಪ್ಪಿನಂಗಡಿಯ ರಾಮಲಿಂಗೇಶ್ವರ ಕಾಲೇಜುಗಳಲ್ಲಿ ಪ್ರತಿಭಟನೆಗಳು ಆಗಿದ್ದವು. ಕಳೆದ ದಶಕದ ನಡುವೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲೂ ಇದು ನಡೆದಿತ್ತು. ನಡುವೆ ಅವರು ರಾಜಿ ಮಾಡಿಕೊಂಡರು. ಆದರೆ ಈ ಬಾರಿಯ ಉಡುಪಿಯ ವಿವಾದ ಮಾತ್ರ ದೊಡ್ಡ ಗೊಂದಲ ಮಾಡಿತು. ಅಂತಾರಾಷ್ಟ್ರೀಯ ಚಾನೆಲ್ ಗಳು ಸಹ ವಿಷಯ ಚರ್ಚಿಸಿದವು. ಕರ್ನಾಟಕ ಉಚ್ಚ ನ್ಯಾಯಾಲಯವು ಮಾರ್ಚ್ 15ರಂದು ಹಿಜಾಬ್ ಇಸ್ಲಾಮ್ ನ ಅವಿಭಾಜ್ಯ ಅಂಗ ಅಲ್ಲ ಎಂದು ತೀರ್ಪು ನೀಡಿತು.
ಕಳೆದ ಎರಡು ದಶಕಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಮುಸ್ಲಿಮ್ ಹುಡುಗಿಯರ ಶಿಕ್ಷಣ ಶಕ್ತಿ ಹೆಚ್ಚುತ್ತಿರುವುದನ್ನು ಹಿಜಾಬ್ ನಿಷೇಧವು ಕಡಿಮೆ ಮಾಡಬಹುದು ಎಂದು ಫೆಬ್ರವರಿ 2022ರ ಪತ್ರಿಕಾ ಸಂದರ್ಶನ ಒಂದರಲ್ಲಿ ಕಾಪುವಿನ ಪೋಷಕರು ಹೇಳಿದರು.
“ಸದ್ಯ ಮುಸ್ಲಿಮ್ ಹುಡುಗಿಯರು ಅವರ ಶಿಕ್ಷಣ ಮುಗಿಸಲು ಅವಕಾಶ ನಿರಾಕರಿಸಿರುವುದು ವಿಷಯ ಹಳ್ಳ ಹಿಡಿಸಿದೆ. ಇಡೀ ವರ್ಷದ ಕಠಿಣ ಓದು ಹಾಳಾಗಬಾರದು ಎಂದು ಕೆಲವರು ಪರೀಕ್ಷೆ ಬರೆಯಲು ಹಿಜಾಬ್ ತೆಗೆದರು. ಕೆಲವರಿಗೆ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳು ಸಹಾಯ ಮಾಡಿದರೆ, ಕೆಲವರು ಮನೆಯಲ್ಲಿ ಪರೀಕ್ಷೆ ಶುಲ್ಕ ಹಿಂದಿರುಗಿಸಿ ಎನ್ನುತ್ತ ಸುಮ್ಮನೆ ಕೂರಬೇಕಾಯಿತು.” ಎಂದು ವಿವರಿಸುತ್ತಾರೆ ವಫಾ.
ಎರಡು ದಶಕಗಳ ಮುನ್ನಡೆ ಈಗ ಮುಗ್ಗರಿಸುತ್ತಿದೆ. ಡಿಡಿಪಿಐ ಮತ್ತು ಮುಸ್ಲಿಮ್ ಒಕ್ಕೂಟವು ಉಡುಪಿ ಜಿಲ್ಲೆಯಲ್ಲಿ ಹಿಜಾಬ್ ಯಾವ ದುಷ್ಪರಿಣಾಮ ಬೀರಿದೆ ಎಂಬುದರ ಅಂಕಿ ಅಂಶ ಸಂಗ್ರಹಿಸುತ್ತಿದ್ದಾರೆ. 232 ಪದವಿ ಮತ್ತು 183 ಪಿಯುಸಿ ಎಂದು 415 ಮುಸ್ಲಿಮ್ ವಿದ್ಯಾರ್ಥಿನಿಯರು ಬಾಧಿಸಲ್ಪಟ್ಟಿರುವುದಾಗಿ ತಿಳಿದು ಬಂದಿದೆ. ಹಿಜಾಬ್ ಒಪ್ಪುವ ಮಂಗಳೂರು ಮೊದಲಾದ ಕಡೆಯ ಶಿಕ್ಷಣ ಸಂಸ್ಥೆಗಳತ್ತ ಕೆಲವರು ವಲಸೆ ಹೋಗಿದ್ದಾರೆ.
ಮುಸ್ಲಿಮ್ ಹುಡುಗಿಯರನ್ನು ಯಾತನೆಗೆ ಒಳಪಡಿಸಿರುವುದು ಹಿಜಾಬ್ ವಿಚಾರ ಮಾತ್ರವಲ್ಲ. “ಶಾಲಾ ಕಾಲೇಜುಗಳ ನಿರ್ವಾಹಕರು, ಕೆಲವು ಶಿಕ್ಷಕರು, ತೀರಾ ಅಲ್ಪ ಪ್ರಮಾಣದಲ್ಲಿ ಕೆಲವು ವಿದ್ಯಾರ್ಥಿಗಳು ಸಹ ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಬಯ್ಯುವ, ಅವಹೇಳನ ಮಾಡುವ, ದ್ವೇಷದ ಸ್ವರ ಎತ್ತುವ ಮೂಲಕ ಮಾನಸಿಕವಾಗಿ ಕುಗ್ಗಿಸುತ್ತಿದ್ದಾರೆ” ಎಂದು ಹೆಸರು ಹೇಳಲಿಚ್ಛಿಸದ ಎಂಜಿಎಂ ಕಾಲೇಜಿನ ಮುಸ್ಲಿಮ್ ವಿದ್ಯಾರ್ಥಿಯೊಬ್ಬ ಬೇಸರದಿಂದ ಹೇಳುತ್ತಾನೆ.
“ಎಳೆಯ ಮುಸ್ಲಿಮ್ ವಿದ್ಯಾರ್ಥಿನಿಯರ ಮೇಲೆ ಬೈಗುಳ, ಮಾನಹಾನಿಕರವಾಗಿ ಕೂಗುವುದು, ಕೀಟಲೆ ಮಾಡುವುದು, ಅವರು ಬಂದಾಗ ಗೇಟ್ ಮುಚ್ಚುವುದು, ಅವರ ಧರ್ಮದ, ಗ್ರಂಥಗಳ ಬಗ್ಗೆ ಬೇಡದ ಪ್ರಶ್ನೆಗಳನ್ನು ಕೇಳುವುದು, ವಿದ್ವತ್ತಿನ ಬಗೆಗೆ ಗೇಲಿ ಮಾಡುವುದು” ಇವನ್ನೆಲ್ಲ ನಾವು ಕಣ್ಣಾರೆ ಕಂಡಿದ್ದೇವೆ” ಎಂದು ಹೇಳುತ್ತಾರೆ ವಫಾ.
ಕಳೆದ ಕೆಲವು ತಿಂಗಳುಗಳಿಂದ ಆಗಿರುವ ಹಾನಿಯನ್ನು ಸರಿಪಡಿಸಲು ನಾವು ತುಂಬ ಕೆಲಸ ಮಾಡಬೇಕಾಗಿದೆ. “ಎಲ್ಲ ನಂಬಿಕೆಗಳ ಜನರಿಗೂ ಅವರವರ ನಂಬಿಕೆ ಪಾಲಿಸಲು ಅವಕಾಶ ನೀಡುವ ರಾಜಕೀಯ ಇಚ್ಛಾಶಕ್ತಿ ಮೊದಲು ಆಗತ್ಯವಿದೆ. ಅಂಥ ವಿಧ್ವಂಸಕ ಶಕ್ತಿಗಳನ್ನು ಮಟ್ಟ ಹಾಕಲು ಮಂತ್ರ ದಂಡವೇನೂ ಇಲ್ಲ.” ಅಂದರು ವಫಾ.
(ಕೃಪೆ: ದಿ ನ್ಯೂಸ್ ಮಿನಿಟ್ ಡಾಟ್ ಕಾಮ್)