ಭಾರತದಲ್ಲಿ ಶತಾಯುಷಿ ಮತದಾರರ ಸಂಖ್ಯೆ 2.49 ಲಕ್ಷ: ರಾಜೀವ್ ಕುಮಾರ್

Prasthutha|

ನವದೆಹಲಿ: ಭಾರತದಲ್ಲಿ 100 ವರ್ಷ ದಾಟಿದ 2.49 ಲಕ್ಷ ಮತದಾರರು ಇದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.ಅವರು ಪೂನಾದ ಬೆಳವಾಡಿ ಪ್ರದೇಶದ ಶಿವ ಛತ್ರಪತಿ ಕ್ರೀಡಾ ಸಮುಚ್ಚಯದಲ್ಲಿ ಬೈಸಿಕಲ್ ರಾಲಿಗೆ ಚಾಲನೆ ನೀಡಿ ಅವರು ಈ ಮಾಹಿತಿ ನೀಡಿದರು.

- Advertisement -

80 ವರ್ಷ ಪ್ರಾಯ ದಾಟಿದ ಮತದಾರರ ಸಂಖ್ಯೆ 1.80 ಕೋಟಿ ಇದೆ ಎಂದೂ ಮತದಾರರ ದಾಖಲಾತಿಗೆ ಪೂರಕವಾಗಿ ನಡೆದ ಬೈಸಿಕಲ್ ಜಾಥಾಕ್ಕೆ ಹಸಿರು ಪತಾಕೆ ತೋರಿಸಿ ಅವರು ಹೇಳಿದರು.

ನಗರ ಪ್ರದೇಶಗಳಲ್ಲಿ ಮತದಾರರ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಯಾರದೇ ಹೆಸರು ಬಿಟ್ಟು ಹೋಗದಂತೆ ದಾಖಲಿಸಲು ಭಾರತೀಯ ಚುನಾವಣಾ ಆಯೋಗ ಯೋಜನೆ ಹಾಕಿಕೊಂಡಿದೆ. ಹಿಮಾಲಯದ ಎತ್ತರದ ತಪ್ಪಲುಗಳಲ್ಲಿ, ಅಲ್ಲಿಂದ 6,000 ಕಿಲೋಮೀಟರ್ ದೂರದ ದಕ್ಷಿಣ ಕರಾವಳಿಗಳಲ್ಲಿ, ಪಶ್ಚಿಮದ ಮರುಭೂಮಿಯಲ್ಲಿ, ಪೂರ್ವದ ಕೊನೆಯವರೆಗೆ ನಮ್ಮ ಮತದಾರರಿದ್ದಾರೆ ಎಂದು ಅವರು ಹೇಳಿದರು.

- Advertisement -

ನೂರು ವರ್ಷ ಪ್ರಾಯ ಮೀರಿದ 2.49 ಲಕ್ಷ ಮತದಾರರಿದ್ದು, ಅವರು ತಮ್ಮ ಜೀವನದುದ್ದಕ್ಕೂ ಮತ ಚಲಾಯಿಸಿದ್ದಾರೆ ಎನ್ನುವುದು ಆನಂದದ ಸಂಗತಿ ಎಂದರು.

ಭಾರತದ ಮೊದಲ ಚುನಾವಣೆಯಲ್ಲಿ ಮತ ಚಲಾಯಿಸಿದ್ದ 106ರ ಪ್ರಾಯದ ಶ್ಯಾಂ ಸರನ್ ನೇಗಿಯವರು ಇತ್ತೀಚೆಗೆ ಮೃತಪಡುವುದಕ್ಕೆ ಮೂರು ದಿನ ಮೊದಲು ಮತ ಹಾಕಿದ್ದರು ಎಂಬುದು ವಿಶೇಷ ಎಂದೂ ರಾಜೀವ್ ಕುಮಾರ್ ಹೇಳಿದರು.

ಮತದಾರರ ಪಟ್ಟಿ ಪರಿಷ್ಕರಣೆ ಪ್ರತಿ ವರ್ಷ ನಡೆಯುತ್ತದೆ. ಈ ವರ್ಷ ಹೆಚ್ಚು ನಿಗಾ ವಹಿಸಿ ನೋಂದಣಿ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದರು.

“ದೂರದ ದೊಡ್ಡ ಬೆಟ್ಟದ ,ಕಡಲ ನೆಲೆಯವರೆಗೆ ನಮ್ಮ ಮತದಾರರಿದ್ದಾರೆ. ಪ್ರತಿಯೊಬ್ಬ ಪೌರರೂ ಮತದಾರರಾಗುವ ಮೂಲಕ ದೇಶದ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕಾಗಿದೆ. ನೋಂದಣಿಯಷ್ಟೇ ಮುಖ್ಯ ಮತ ಹಾಕುವುದೂ ಆಗಿದೆ” ಎಂದು ಆಯುಕ್ತರು ಹೇಳಿದರು.

ನಮ್ಮ ಯುವಜನರು ತಾವಾಗಿಯೇ ಮುಂದೆ ಬಂದು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು. “ನಿಮ್ಮ ಮತದಿಂದ ಮಾತ್ರ ನಮ್ಮ ಪ್ರಜಾಪ್ರಭುತ್ವ ಬಲಗೊಳ್ಳುವುದು” ಎಂದು ಅವರು ಹೇಳಿದರು.
“ಹಲವು ನಗರಗಳಲ್ಲಿ ತುಂಬ ಜನ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಲ್ಲ. ಹೆಸರು ಇರುವವರು ಕೂಡ ಪಟ್ಟಣವಾಸಿಗಳು ಮತ ಹಾಕುವುದು ಕಡಿಮೆ. ಹಾಗಾಗಿ ನಗರ ಪ್ರದೇಶಕ್ಕೆ ಆದ್ಯತೆ ನೀಡಿ ಕೆಲಸ ನಡೆದಿದೆ” ಎಂದು ಅವರು ಹೇಳಿದರು.

“ಯುವಕರು ಜಾಲ ತಾಣಗಳಲ್ಲಿ ಓಡಾಡಿದರೆ ಸಾಲದು; ಮತ ಹಾಕುವತ್ತಲೂ ಓಡಾಡಬೇಕು” ಎಂದು ಅವರು ತಿಳಿಸಿದರು.

ಈ ಬಾರಿ ಪೂನಾದಿಂದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಆರಂಭವಾಗುತ್ತಿದೆ ಎಂದೂ ಅವರು ತಿಳಿಸಿದರು.

“ಪೂನಾದಲ್ಲಿ 2019ರ ಲೋಕ ಸಭಾ ಚುನಾವಣೆಯಲ್ಲಿ 49.84% ಮಾತ್ರ ಮತದಾನ ಆಗಿದೆ. ಆದ್ದರಿಂದ ಇಲ್ಲಿನ ಮತದಾರರನ್ನು ಎಚ್ಚರಿಸಲು ಇಲ್ಲಿಂದ ಆರಂಭ ಮಾಡುತ್ತಿದ್ದೇವೆ” ಎಂದು ಮಾಧ್ಯಮದವರಿಗೆ ರಾಜೀವ್ ಕುಮಾರ್ ಒತ್ತಿ ಹೇಳಿದರು.

ಮತದಾನದ ದಿನ ರಜೆ ಘೋಷಿಸಿದರೂ ನಗರ ಮತದಾರರು ಏಕೆ ಸ್ಪಂದಿಸುತ್ತಿಲ್ಲ ಎನ್ನುವ ಬಗ್ಗೆ ಅಧ್ಯಯನ ಆಗಬೇಕಾಗಿದೆ ಎಂದು ಅವರು ತಿಳಿಸಿದರು.

ಹೊಸದಾಗಿ 18ರ ಪ್ರಾಯಕ್ಕೆ ಕಾಲಿಡುವವರು ಕೂಡಲೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಿ ಎಂದು ಅವರು ಕಿವಿಮಾತು ಹೇಳಿದರು.

Join Whatsapp