ಮಂಗಳೂರು| NSUI ನಾಯಕರ ಬಿಡುಗಡೆ ಆಗ್ರಹಿಸಿ, ರಸ್ತೆ ತಡೆದು ಪ್ರತಿಭಟನೆ

Prasthutha|

ಮಂಗಳೂರು: NSUI ವಿದ್ಯಾರ್ಥಿ ಸಂಘಟನೆ ನಾಯಕರ ಬಂಧನ ವಿರೋಧಿಸಿ ಹಾಗೂ ತಕ್ಷಣವೇ ಬಿಡುಗಡೆಗೆ ಆಗ್ರಹಿಸಿ ನಗರದ ಮಲ್ಲಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿ ಮುಂಭಾಗ ದ.ಕ. ಜಿಲ್ಲಾ NSUI ಘಟಕ ವತಿಯಿಂದ ಪ್ರತಿಭಟನೆ ನಡೆಯಿತು. ಮಲ್ಲಿಕಟ್ಟೆಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ NSUI ಕಾರ್ಯಕರ್ತರು‌ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ, ಪ್ರತಿಭಟನಾಕಾರರನ್ನು‌ ಪೊಲೀಸರು ರಸ್ತೆಯಿಂದ ತೆರವುಗೊಳಿಸಿದರು.

- Advertisement -

ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ NSUI ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹಾನ್ ಆಳ್ವ, ಶಿಕ್ಷಣ ಸಚಿವರ ಮನೆಗೆ ಮುತ್ತಿಗೆ ಹಾಕಲಾಗಿದೆ ಎಂಬ ಕ್ಷುಲ್ಲಕ ನೆಪವನ್ನಿರಿಸಿ NSUI ರಾಜ್ಯ ಘಟಕಾಧ್ಯಕ್ಷ ಕೀರ್ತಿ ಗಣೇಶ್ ಸೇರಿದಂತೆ ಹಲವು ಕಾರ್ಯಕರ್ತರನ್ನು ಬಂಧಿಸಲಾಗಿದೆ. ರಾಜ್ಯ ಸರಕಾರ ಪ್ರತಿಭಟನೆ ಹಕ್ಕನ್ನು ದಮನಿಸುತ್ತಿರುವುದು ಸರಿಯಲ್ಲ. ಬಂಧಿತರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು, ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟಿನ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

NSUI ಮುತ್ತಿಗೆ ವೇಳೆ ಶಿಕ್ಷಣ ಸಚಿವರ ಮನೆಗೆ ಬೆಂಕಿ ಹಚ್ಚಲಾಗಿದೆ ಎನ್ನುತ್ತಿದ್ದಾರೆ. ಆದರೆ, ಬೆಂಕಿ ಹಚ್ಚುವ ಸಂಸ್ಕೃತಿ NSUI ನದ್ದಲ್ಲ, ಇಡೀ ಜಿಲ್ಲೆಗೆ ಬೆಂಕಿ ಹಚ್ಚುತ್ತೇವೆ ಎಂದಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ಪಕ್ಷದ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದರು.

- Advertisement -

ದ.ಕ.‌ ಜಿಲ್ಲಾ NSUI ಘಟಕಾಧ್ಯಕ್ಷ ಸವಾದ್ ಸುಳ್ಯ ಮಾತನಾಡಿ, 24 ಗಂಟೆಯಲ್ಲಿ ಬಂಧಿತ ನಾಯಕರನ್ನು ಬಿಡುಗಡೆಗೊಳಿಸದಿದ್ದಲ್ಲಿ, ಜಿಲ್ಲೆಯ ಕಾಲೇಜುಗಳನ್ನು ಬಂದ್ ನಡೆಸಿ ಪ್ರತಿಭಟಿಸುವುದಾಗಿ ತಿಳಿಸಿದರು. ಪ್ರತಿಭಟನೆಯಲ್ಲಿ NSUI ಜಿಲ್ಲಾ ಉಪಾಧ್ಯಕ್ಷ ಶಾನ್ ಶಿರಿ, NSUI ಸಾಮಾಜಿಕ ಜಾಲತಾಣ ರಾಜ್ಯ ಉಪಾಧ್ಯಕ್ಷ ಸಾಹಿಲ್, ಅಖಿನೇಶ್, ಅಝೀಂ, ಸಿರಾಜ್ ಉಪಸ್ಥಿತರಿದ್ದರು

Join Whatsapp