ಬೆಂಗಳೂರು: ಒಪಿಎಸ್ ಪಿಂಚಣಿ ನೀತಿಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಹೋ ರಾತ್ರಿ ಧರಣಿ ಕೈಗೊಂಡಿರುವ ಎನ್’ಪಿಎಸ್ ನೌಕರರ ಸಂಘದ ಪ್ರತಿಭಟನೆ ಶನಿವಾರ ಆರನೇ ದಿನಕ್ಕೆ ಕಾಲಿರಿಸಿದ್ದು, ಇಂದು ರಾಜ್ಯದ ವಿವಿಧ ಜಿಲ್ಲೆಗಳ ಸಾವಿರಾರು ನೌಕರರು ಭಾಗವಹಿಸಿದ್ದರು.
ಎನ್’ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಂ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ, ಈಗಾಗಲೇ ಎನ್’ಪಿಎಸ್ ಕೈಗೊಂಡಿರುವ ಧರಣಿ ಆರನೇ ದಿನಕ್ಕೆ ಕಾಲಿರಿಸಿದೆ. ಕಲಾಪದಲ್ಲಿ ಅನೇಕ ಶಾಸಕರು ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ರಾಜ್ಯ ಸರ್ಕಾರದ ಯಾವ ಪ್ರತಿನಿಧಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸುವ ಬದಲು ರಾಜ್ಯ ಸರ್ಕಾರ ಸದನದ ಮೂಲಕವೇ ಸೂಕ್ತ ಉತ್ತರ ನೀಡಿದರೆ ಒಳಿತು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕ್ರಾಂತಿ ಗೀತೆಗಳ ಮೂಲಕ ಧರಣಿ ನಿರತ ಹೋರಾಟಗಾರರನ್ನು ಹುರಿದುಂಬಿಸಲಾಗುತ್ತಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಾವಿರಾರು ನೌಕರರಿಗೆ ಯಾವುದೇ ತೊಂದರೆಯಾಗದಂತೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಮೂಲತಃ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿಯವರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಬೇಕೆಂದು ದಾವಣಗೆರೆ ಎನ್ ಪಿ ಎಸ್ ನೌಕರರ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.
ಸ್ವಾತಂತ್ರ್ಯ ಉದ್ಯಾನವನದಲ್ಲಿ ಧರಣಿಯಲ್ಲಿ ಪಾಲ್ಗೊಂಡಿರುವ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ್, ಪ್ರವೀಣ್ ಸುದ್ದಿಗಾರರೊಂದಿಗೆ ಮಾತನಾಡಿ, ಎನ್’ಪಿಎಸ್ ಜಾರಿಯಿಂದ ಸಾವಿರಾರು ನೌಕರರು ನಿವೃತ್ತಿ ಹೊಂದಿದಾಗ ಅವರ ಮುಂದಿನ ಜೀವನ ನಿರ್ವಹಣೆ ಕಷ್ಟವಾಗಲಿದೆ. ಹಳೆಯ ಪಿಂಚಣಿ ಪದ್ಧತಿ ಜಾರಿಯಾದರೆ ಸ್ವಲ್ಪ ಮಟ್ಟಿಗಾದರೂ ಗೌರವದ ಬದುಕು ನಡೆಸಬಹುದು. ನಾವೆಲ್ಲ ಸೇರಿ ಬೆಂಬಲ ವ್ಯಕ್ತಪಡಿಸಿದ್ದರಿಂದ ರಾಜ್ಯಾಧ್ಯಕ್ಷ ಷಡಕ್ಷರಿಯವರು ಆ ಸ್ಥಾನಕ್ಕೆ ಬರಲು ಸಾಧ್ಯವಾಗಿದೆ. ಆದರೆ ನಮಗೆ ಬೆಂಬಲ ವ್ಯಕ್ತಪಡಿಸದೇ ಅವರು ನಮ್ಮ ಮನೋ ಸ್ಥೈರ್ಯವನ್ನು ಕುಗ್ಗಿಸುವ ಮಾತನಾಡುತ್ತಿರುವುದು ಸರಿಯಲ್ಲ. ನಿಮ್ಮ ಕಾಲಾವಧಿಯಲ್ಲಿ ಜ್ಯೋತಿ ಸಂಜೀವಿನಿ ಸೇರಿದಂತೆ ಅನೇಕ ಯೋಜನೆಗಳು ಜಾರಿ ಬಂದಿದೆ. ಧರಣಿಯಲ್ಲಿ ತಾವು ಪಾಲ್ಗೊಂಡು ಸಹಕರಿಸಿದರೆ ನಮಗೆ ಆನೆ ಬಂದಂತಾಗುತ್ತದೆ ಎಂದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸರ್ಕಾರಿ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಮಾತನಾಡಿ, ಈಗಾಗಲೇ ಸಾವಿರಾರು ನೌಕರರು ಟ್ವಿಟರ್ ಅಭಿಯಾನದ ಮೂಲಕ ನಮ್ಮ ಬೇಡಿಕೆಯನ್ನು ಸರ್ಕಾರಕ್ಕೆ ತಲುಪಿಸುವ ಕಾರ್ಯವನ್ನು ನಡೆಸಿದ್ದಾರೆ. ಒಂದೆರಡು ದಿನಗಳಲ್ಲಿ ನಮ್ಮ ಬೇಡಿಕೆ ಈಡೇರುವ ಸಾಧ್ಯತೆಗಳು ಇದೆ ಎಂದು ಹೇಳಿದರು.
ಆರನೇ ದಿನದ ಧರಣಿಯಲ್ಲಿ ತುಮಕೂರು ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘದ ತಿಪೇಸ್ವಾಮಿ, ಉಪಾಧ್ಯಕ್ಷ ರಂಗನಾಥ್, ಸಿಂಡಿಕೇಟ್ ಸದಸ್ಯ ಬಾನು ಪ್ರಕಾಶ್, ಎನ್’ಪಿಎಸ್ ಸಂಘಟನಾ ಕಾರ್ಯದರ್ಶಿ ರೂಪ ಎಚ್.ಆರ್., ಸಾಮಾಜಿಕ ಜನಪರ ಹೋರಾಟಗಾರ ವಿವೇಕಾನಂದ ಸೇರಿದಂತೆ ಅನೇಕರು ಹಾಜರಿದ್ದರು.
ಧರಣಿಯ ಮೊದಲ ದಿನ ಆಮ್ ಆದ್ಮಿ ಪಕ್ಷ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಮರುಜಾರಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್’ಪಿ’ಎಸ್ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಆಮ್ ಆದ್ಮಿ ಪಾರ್ಟಿ ಬೆಂಬಲ ಸೂಚಿಸಿತು.
ಪಕ್ಷದ ಮುಖಂಡರೊಂದಿಗೆ ಫ್ರೀಡಂ ಪಾರ್ಕ್ಗೆ ತೆರಳಿದ ರಾಜ್ಯ ಎಎಪಿ ಉಪಾಧ್ಯಕ್ಷ ಭಾಸ್ಕರ್ ರಾವ್ ಮಾತನಾಡಿ, ರಾಜ್ಯದಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ಶೀಘ್ರವೇ ಎನ್ಪಿಎಸ್ ರದ್ದುಪಡಿಸಿ, ಒಪಿಎಸ್ ಜಾರಿಗೆ ತರುವುದಾಗಿ ಘೋಷಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಭಾಸ್ಕರ್ ರಾವ್, “ಅಧಿಕಾರ ಸಿಕ್ಕರೆ ಒಪಿಎಸ್ ಜಾರಿಗೆ ತರುವುದಾಗಿ ಪಂಜಾಬ್ ಚುನಾವಣೆ ವೇಳೆ ಆಮ್ ಆದ್ಮಿ ಪಾರ್ಟಿಯು ಭರವಸೆ ನೀಡಿತ್ತು. ಅದರಂತೆ ಅಲ್ಲಿನ ಸಚಿವ ಸಂಪುಟವು ಒಪಿಎಸ್ ಜಾರಿಗೆ ನವೆಂಬರ್ ತಿಂಗಳಿನಲ್ಲಿ ಅನುಮೋದನೆ ನೀಡಿ, ಸರ್ಕಾರವು ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ. ಗುಜರಾತ್’ನಲ್ಲಿ ಕೂಡ ಒಪಿಎಸ್ ಜಾರಿ ಕುರಿತು ಎಎಪಿ ಭರವಸೆ ನೀಡಿತ್ತಾದರೂ ಅಲ್ಲಿ ಪಕ್ಷ ಅಧಿಕಾರಕ್ಕೆ ಬರಲಿಲ್ಲ. ಕರ್ನಾಟಕದಲ್ಲಿ ನಾವು ಅಧಿಕಾರಕ್ಕೆ ಬಂದರೆ ಒಪಿಎಸ್ ಜಾರಿಗೆ ತರಲು ಬದ್ಧರಾಗಿದ್ದೇವೆ. ಚುನಾವಣಾ ಪ್ರಣಾಳಿಕೆ ಹಾಗೂ ಜನರಿಗೆ ನೀಡುವ ಗ್ಯಾರೆಂಟಿ ಕಾರ್ಡ್ನಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸುತ್ತೇವೆ. ಎಎಪಿಯು ಸರ್ಕಾರಿ ನೌಕರರ ಹಿತ ಕಾಪಾಡಲು ಸದಾ ಬದ್ಧವಾಗಿರುತ್ತದೆ” ಎಂದು ಹೇಳಿದರು.