ಮೊದಲಬಾರಿಗೆ ತಾಜ್ ಮಹಲ್ ಗೆ  ತೆರಿಗೆ ಪಾವತಿಸುವಂತೆ ನೋಟಿಸ್

Prasthutha|

ಆಗ್ರಾ: ಸಂರಕ್ಷಿತ ಸ್ಮಾರಕವಾದ ತಾಜ್ ಮಹಲ್ ಗೆ 1.9 ಕೋಟಿ ರೂ.ಗಳನ್ನು ನೀರಿನ ತೆರಿಗೆಯಾಗಿ ಮತ್ತು 1.5 ಲಕ್ಷ ರೂ.ಗಳನ್ನು ಆಸ್ತಿ ತೆರಿಗೆಯಾಗಿ ಪಾವತಿಸುವಂತೆ ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್ಐ) ಮೊದಲ ಬಾರಿಗೆ ನೋಟಿಸ್ ಕಳುಹಿಸಿದೆ. 2021-22 ಮತ್ತು 2022-23ರ ಹಣಕಾಸು ವರ್ಷಕ್ಕೆ ಈ ಮಸೂದೆಗಳು ಸಲ್ಲಿಕೆಯಾಗಿವೆ.

- Advertisement -

15 ದಿನಗಳೊಳಗೆ ಪಾವತಿಸುವಂತೆ ಎಎಸ್’ಐಗೆ ಸೂಚಿಸಲಾಗಿದ್ದು, ನಿಗದಿತ ಸಮಯದೊಳಗೆ ತೆರಿಗೆಯನ್ನು ಪಾವತಿಸದಿದ್ದರೆ ಆಸ್ತಿಯನ್ನು (ತಾಜ್ ಮಹಲ್) “ಮುಟ್ಟುಗೋಲು ಹಾಕಿಕೊಳ್ಳಲಾಗುವುದು” ಎಂದು ನೋಟಿಸ್’ನಲ್ಲಿ ತಿಳಿಸಲಾಗಿದೆ.

ಮಾರ್ಚ್ 31 ರಿಂದ ಅನ್ವಯಿಸುವಂತೆ ಬಾಕಿ ಉಳಿದಿರುವ 88,784 ರೂಪಾಯಿಗೆ 47,943 ಬಡ್ಡಿ ಸೇರಿಸಿ 1.37 ಲಕ್ಷ ರೂಪಾಯಿಯನ್ನು ಪಾವತಿಸುವಂತೆ ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ ಎಎಸ್ಐಗೆ ನೋಟಿಸ್ ನೀಡಿದೆ. ತಾಜ್ ಜೊತೆಗೆ, ಯಮುನಾ ನದಿಗೆ ಅಡ್ಡಲಾಗಿರುವ ಸ್ಮಾರಕವಾದ ಎತ್ಮಾದ್-ಉದ್-ದೌಲಾ ಸ್ಮಾರಕಕ್ಕೂ ಕೂಡ ತೆರಿಗೆ ಪಾವತಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ.

- Advertisement -

2022-23ನೇ ವರ್ಷದ ಮನೆ ತೆರಿಗೆಯನ್ನು 11,098 ರೂಪಾಯಿ ಎಂದು ನೋಟಿಸ್’ನಲ್ಲಿ ತೋರಿಸಲಾಗಿದೆ. ಸ್ಯಾಟಲೈಟ್ ಇಮೇಜ್ ಮ್ಯಾಪಿಂಗ್ ಮೂಲಕ ಮನೆ ತೆರಿಗೆಗಾಗಿ ಸಾಯಿ ಕನ್’ಸ್ಟ್ರಕ್ಷನ್ ಕಂಪನಿ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ಈ ನೋಟಿಸ್ ನೀಡಲಾಗಿದೆ ಎಂದು ಸಹಾಯಕ ಮುನ್ಸಿಪಲ್ ಕಮಿಷನರ್ ಮತ್ತು ತಾಜ್ಗಂಜ್ ವಲಯ ಉಸ್ತುವಾರಿ ಸರಿತಾ ಸಿಂಗ್ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಎಎಸ್ಐ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ ರಾಜ್ ಕುಮಾರ್ ಪಟೇಲ್, “ಸ್ಮಾರಕಗಳಿಗೆ ಆಸ್ತಿ ತೆರಿಗೆ ಅನ್ವಯವಾಗುವುದಿಲ್ಲ. ನೀರಿನ ವಾಣಿಜ್ಯ ಬಳಕೆಯಿಲ್ಲದ ಕಾರಣ ನಾವು ಅದಕ್ಕೆ ತೆರಿಗೆ ಪಾವತಿಸಲು ಸಹ ಬಾಧ್ಯಸ್ಥರಾಗಿರುವುದಿಲ್ಲ. ಆವರಣದೊಳಗೆ ಹಸಿರನ್ನು ಕಾಪಾಡಿಕೊಳ್ಳಲು ನೀರನ್ನು ಬಳಸಲಾಗುತ್ತದೆ. ತಾಜ್ ಮಹಲ್’ಗೆ ನೀರು ಮತ್ತು ಆಸ್ತಿ ತೆರಿಗೆಗೆ ಸಂಬಂಧಿಸಿದ ನೋಟಿಸ್’ಗಳನ್ನು ಮೊದಲ ಬಾರಿಗೆ ಸ್ವೀಕರಿಸಲಾಗಿದೆ ಎಂದು ಹೇಳಿದ್ದಾರೆ.



Join Whatsapp