ಚೆನ್ನೈ: ಸೇವಾ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ ಅವರಿಗೆ ಜಿಎಸ್ಟಿ ಇಲಾಖೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಇಲಾಖೆಯು ಅವರಿಗೆ ಮೂರು ಬಾರಿ ಎಚ್ಚರಿಕೆ ನೀಡಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಈ ಬಾರಿ ಜಿಎಸ್‌ಟಿ ಚೆನ್ನೈ ವಲಯ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ.
2013 ರಿಂದ 2015ರ ಅವಧಿಯ ಚಲನಚಿತ್ರಗಳಲ್ಲಿ ಸಂಗೀತ ಸಂಯೋಜನೆ ಮಾಡಿದ್ದಕ್ಕಾಗಿ ಚಿತ್ರ ನಿರ್ಮಾಪಕರಿಂದ ಪಡೆದ ಸಂಭಾವನೆಯ ಮೇಲೆ ಸೇವಾ ತೆರಿಗೆಯಾಗಿ 1.87 ಕೋಟಿ ರೂ ಪಾವತಿಸಬೇಕಾಗಿತ್ತು.
ಫೆಬ್ರವರಿ 28 ರಂದು ಮೊದಲ ಬಾರಿ ಮತ್ತು ಮಾರ್ಚ್ 10 ರಂದು ಖುದ್ದು ಹಾಜರಾಗಿ ತೆರಿಗೆ ದಾಖಲೆಗಳನ್ನು ಸಲ್ಲಿಸುವಂತೆ ಎರಡನೇ ಬಾರಿ ಸಮನ್ಸ್ನಲ್ಲಿ ಸೂಚಿಸಲಾಗಿತ್ತು. ಮಾರ್ಚ್ 21ರಂದು ಮೂರನೇ ಬಾರಿಯೂ ಸಮನ್ಸ್ ನೀಡಿತ್ತು. ಅದರಂತೆ ಅವರು ಮಾರ್ಚ್ 28 ರಂದು ಹಾಜರಾಗಬೇಕಿತ್ತು. ಆದರೆ ಯಾವುದಕ್ಕೂ ಅವರು ಮಣೆ ಹಾಕಿರಲಿಲ್ಲ.
ಇದರ ನಂತರ ಇಳಯರಾಜ ಅವರು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಹೋಲಿಸಿ ಪ್ರಧಾನಿ ಮೋದಿಯನ್ನು ಹೊಗಳಿ ಪುಸ್ತಕವೊಂದರಲ್ಲಿ ಮುನ್ನುಡಿ ಬರೆದಿದ್ದರು. ಇದರ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಜೊತೆಗೆ ತನ್ನ ವಿರುದ್ಧದ ಕಾನೂನು ಕ್ರಮವನ್ನು ತಪ್ಪಿಸಲು ಅವರು ಮೋದಿಯನ್ನು ಹೊಗಳಿದ್ದಾರೆ ಎಂದು ಆರೋಪಿಸಲಾಗಿತ್ತು.