ನಮ್ಮ ಬದುಕೇ ಒಂದು ಪುಸ್ತಕ. ಅದು ಹೇಗಿರಬೇಕೆಂದರೆ ಬದುಕಿದ ಪ್ರತೀ ಪುಟಗಳನ್ನು ತಿರುವಿ ಹಾಕಿ ಮತ್ತೆ ಮತ್ತೆ ಓದುತ್ತ ಮನನ ಮಾಡಿಕೊಳ್ಳುವಂತಿರಬೇಕು. ವಿದ್ಯಾರ್ಥಿ ಜೀವನದಲ್ಲಿ ಮುಂದಿನ ಸಮಾಜನಿರ್ಮಾಣ ಹೇಗೆ ಮಾಡಬೇಕೆಂಬುದನ್ನು ರೂಢಿಸಿಕೊಳ್ಳಬೇಕು ಎಂದು ರೋಟರಿ ಸಿಟಿ ಸೆಂಟರ್’ನ ಅಧ್ಯಕ್ಷ ಡಿ.ಸಿ. ರಮೇಶ್‌ಗೌಡ ನುಡಿದರು.
ಅವರು ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್, ಬೆಂಗಳೂರಿನ ರೋಟರಿ ಸಿಟಿ ಸೆಂಟರ್ ಹಾಗೂ ಹ್ಯುಮಾನಿಟಿ ಫಸ್ಟ್ ಫೌಂಡೇಷನ್ ಸಂಯುಕ್ತವಾಗಿ ಬನ್ನಿಕುಪ್ಪೆಯ ಶ್ರೀ ಕೆಂಗಲ್ ಆಂಜನೇಯಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯ 226 ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಮಾಡಿ ಮಾತನಾಡಿದರು.
ಪಾಠದ ಜೊತೆಗೆ ಆಟಗಳನ್ನೂ ರೂಢಿಸಿಕೊಳ್ಳುವುದರಿಂದ ಇಂದಿನ ಮಾರಕ ರೋಗಗಳಿಂದ ಮುಕ್ತರಾಗಬಹುದು, ಇದೇ ಆರೋಗ್ಯದ ಗುಟ್ಟು ಎಂದರು.
ಕೆ.ಎಸ್.ಎ. ಟ್ರಸ್ಟ್ ಕಾರ್ಯದರ್ಶಿ ಡಾ. ಎಂ. ಬೈರೇಗೌಡ ಮಾತನಾಡುತ್ತ, ಗ್ರಾಮೀಣ ಮಕ್ಕಳ ಆಲೋಚನೆ ಕನಿಷ್ಠ ನೂರು ವರ್ಷಗಳ ಮುಂದಿರುತ್ತದೆ. ಹಳ್ಳಿಗಮಾರ ಎಂದು ಅವರನ್ನು ಧಮನ ಮಾಡುವ ಜನರೇ ತುಂಬಿರುವ ಸಮಾಜದಲ್ಲಿ ಅವರ ಆಲೋಚನೆಗಳಿಗೆ ಕಿಮ್ಮತ್ತಿಲ್ಲ ಎಂದರು. ದೇಶ ಕಟ್ಟುವಲ್ಲಿ ಹಳ್ಳಿಗಾಡಿನ ಮಕ್ಕಳ ಪಾತ್ರ ದೊಡ್ಡದು. ಅದನ್ನು ಪರಿಗಣಿಸಿ ಸೂಕ್ತ ಅವಕಾಶಗಳನ್ನು ಕಲ್ಪಿಸಿಕೊಡಬೇಕಾದ ಅಗತ್ಯವನ್ನು ತಿಳಿಸಿದರು.
ಹ್ಯುಮಾನಿಟಿ ಫಸ್ಟ್ ಫೌಂಡೇಷನ್ ಅಧ್ಯಕ್ಷ ಉದಯಕುಮಾರ್ ಮಾತನಾಡಿ, ಮಕ್ಕಳೇ ಸಮಾಜದ ಭವಿಷ್ಯ. ಸದೃಢ ದೇಶಕಟ್ಟುವ ಕೆಲಸ ನಿಮ್ಮಿಂದಾಗಬೇಕು. ಧರ್ಮ, ಜಾತಿ, ಭಾಷೆ, ವೇಶಗಳನ್ನೂ ಮೀರಿ ದೇಶ ಕಟ್ಟುವ ಕೆಲಸದಲ್ಲಿ ನಿರತರಾಗೋಣ ಎಂದು ಕರೆ ನೀಡಿದರು.
ಇಂದಿನ ಎಲ್ಲ ಸಮಸ್ಯೆಗಳಿಗೂ ಮಾನವೀಯ ಮೌಲ್ಯಗಳ ಕೊರತೆಯೇ ಕಾರಣ ಎಂದು ನುಡಿದರು.
ರೋಟರಿ ಸಿಟಿ ಯೂತ್ ಪ್ರಸಿಡೆಂಟ್ ಅರುಣ್ ಕುಮಾರ್, ರೊಟೆರಿಯನ್ ಅಶೋಗನ್ ಕಾರ್ಯಕ್ರಮದಲ್ಲಿ ಪಾಲ್ಗೊಮಡಿದ್ದರು. ಮುಖ್ಯ ಶಿಕ್ಷಕ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು.