‘ನನ್ನ ಸೋಲಿಗೆ ನೋಟಾ ಕಾರಣ’ ಎಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ!

Prasthutha|

ದಾವಣಗೆರೆ: ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಮೇ 13ರಂದು ಹೊರಬಿದ್ದಿದ್ದು, ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 135 ಸ್ಥಾನಗಳಲ್ಲಿ, ಬಿಜೆಪಿ 66 ಜೆಡಿಎಸ್ 19 ಹಾಗೂ ಇತರರು ಅಂದರೆ ಪಕ್ಷೇತರರು 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

- Advertisement -

ಜಗಳೂರು ಕ್ಷೇತ್ರದಿಂದ ಪಕ್ಷೇತರ ಹಾಗೂ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಚ್.ಪಿ.ರಾಜೇಶ್ “ನೋಟಾದಿಂದಾಗಿ ನಾನು ಸೋಲನುಭವಿಸಿದೆ” ಎಂದು ಅಳಲು ತೋಡಿಕೊಂಡಿದ್ದಾರೆ.

ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಪಕ್ಷೇತರವಾಗಿ ಸ್ಪರ್ಧಿಸಿದ್ದ ಎಚ್.ಪಿ.ರಾಜೇಶ್ 49442 ಮತಗಳನ್ನು ಪಡೆದುಕೊಂಡಿದ್ದರೆ, ಕಾಂಗ್ರೆಸ್ನ ದೇವೇಂದ್ರಪ್ಪ 50765 ಮತಗಳನ್ನು ಪಡೆದುಕೊಳ್ಳುವ ಮೂಲಕ ಕೇವಲ 1323 ವೋಟ್ನಿಂದ ಗೆಲುವು ಸಾಧಿಸಿದ್ದಾರೆ. ಜಗಳೂರು ಕ್ಷೇತ್ರದಲ್ಲಿ ಈ ಬಾರಿ 2,241 ನೋಟಾ ಮತಗಳು ಚಲಾವಣೆಯಾಗಿದ್ದು, ನಾಲ್ಕನೇ ಸ್ಥಾನದಲ್ಲಿವೆ. ವಿಶೇಷವೆಂದರೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪಡೆದ ಮತಗಳಿಗಿಂತ ನೋಟಾ ವೋಟುಗಳೇ ಹೆಚ್ಚು. ಹೀಗಾಗಿ ಮತದಾರರ ಬದಲು ನೋಟಾ ನನ್ನ ಸೋಲಿಗೆ ಕಾರಣ ಎಂದು ಎಚ್.ಪಿ.ರಾಜೇಶ್ ಹೇಳಿಕೊಂಡಿದ್ದಾರೆ.

- Advertisement -

“ನನಗೆ 49442 ಮತಗಳು ಬಂದಿವೆ. ಗೆದ್ದ ಕಾಂಗ್ರೆಸ್ ನ ದೇವೇಂದ್ರಪ್ಪ ಅವರಿಗೆ 50765 ಮತ ಬಂದಿವೆ. ನನ್ನ ಕ್ರಮಸಂಖ್ಯೆ ಹನ್ನೊಂದು ಆಗಿತ್ತು. ನನ್ನ ಕ್ರಮ ಸಂಖ್ಯೆ ಮುಗಿದ ಬಳಿಕ ನೋಟಾ ಬಟನ್ ಇತ್ತು. ನಾವು ಮತದಾರರಿಗೆ ಕೆಳಗಿನಿಂದ ಮೊದಲ ಬಟನ್ ಎಂದು ಸೂಚಿಸಿದ್ದೆವು. ಇದೇ ಕಾರಣಕ್ಕೆ ಅಮಾಯಕ ಜನ 2,241 ಜನ ನೋಟಾ ಬಟನ್ ಒತ್ತಿದ್ದಾರೆ. ನಾನು 918 ಮತಗಳಿಂದ ಗೆಲ್ಲಬೇಕಿತ್ತು. ನೋಟಾದಿಂದಾಗಿ ಸೋಲು ಕಂಡಂತಾಯಿತು” ರಾಜೇಶ್ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Join Whatsapp