ನಾನಲ್ಲ, ನಿರ್ಮಲಾ ಸೀತಾರಾಂ ರಾಜೀನಾಮೆ ಕೊಡಲಿ: ಸಿದ್ದರಾಮಯ್ಯ

Prasthutha|

ಬೆಂಗಳೂರು: ಕೇಂದ್ರ ಸರ್ಕಾರದ ಸ್ವಾಮ್ಯದ ಯೂನಿಯನ್‌ ಬ್ಯಾಂಕ್‌ನಲ್ಲಿರುವ ಖಾತೆಯಿಂದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮವಾಗಿ ವರ್ಗಾವಣೆಯಾದ ಹೊಣೆಯನ್ನು ಹೊತ್ತುಕೊಂಡು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ರಾಜೀನಾಮೆ ಕೊಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗರಿಗೆ ತಿವಿದಿದ್ದಾರೆ.

- Advertisement -

ನಿಗಮದ ಬ್ಯಾಂಕ್‌ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಆಗಿರುವ ಹಗರಣ ಕುರಿತು ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಶುಕ್ರವಾರ ಉತ್ತರ ನೀಡಿದ ಅವರು, ‘ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯ ಅಧೀನದಲ್ಲಿದೆ. ಕೇಂದ್ರ ಹಣಕಾಸು ಸಚಿವರು ಈ ಹಗರಣದ ಹೊಣೆ ಹೊರುತ್ತಾರೆಯೇ’ ಎಂದು ಪ್ರಶ್ನಿಸಿದರು.

ವಿರೋಧ ಪಕ್ಷಗಳ ಸದಸ್ಯರ ಗದ್ದಲದ ಮಧ್ಯೆಯೇ ಉತ್ತರ ನೀಡಿದ ಸಿದ್ದರಾಮಯ್ಯ, ಲಿಖಿತ ಭಾಷಣವನ್ನು ಓದಿದರು. ಮಧ್ಯದಲ್ಲಿ ಕೆಲವೊಮ್ಮೆ ಏರು ದನಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

- Advertisement -

‘ಹಗರಣಕ್ಕೆ ಮುಖ್ಯಮಂತ್ರಿಯೇ ಹೊಣೆ ಎಂಬ ಬಿಜೆಪಿ ಆರೋಪದಲ್ಲಿ ಹುರುಳಿಲ್ಲ. ಆಯಾ ಇಲಾಖೆಗಳಿಗೆ ಅನುದಾನ ಬಿಡುಗಡೆ ಮಾಡುವುದಷ್ಟೇ ಹಣಕಾಸು ಇಲಾಖೆಯ ಕೆಲಸ. ಅಲ್ಲಿ ಅನುದಾನ ಬಳಕೆಯ ನಿರ್ಧಾರ ಕೈಗೊಳ್ಳುವುದು ನಿಗಮಗಳ ಮುಖ್ಯಸ್ಥರದ್ದೇ ಜವಾಬ್ದಾರಿ. ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆ ಬದಲಾವಣೆಗೆ ಮುನ್ನ ಹಣಕಾಸು ಇಲಾಖೆಯ ಅನುಮತಿಯನ್ನೂ ಪಡೆದಿರಲಿಲ್ಲ. ಈ ಅಕ್ರಮಕ್ಕೂ ನನಗೂ ಯಾವ ಸಂಬಂಧವೂ ಇಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಲೆಕ್ಕಾಧೀಕ್ಷಕ ಪಿ. ಚಂದ್ರಶೇಖರನ್‌ ಮೇ 26ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ಪ್ರಕರಣದ ತನಿಖೆಗೆ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಲಾಗಿತ್ತು. ಎಸ್‌ಐಟಿ ಈವರೆಗೆ 12 ಮಂದಿಯನ್ನು ಬಂಧಿಸಿದೆ. ₹85.25 ಕೋಟಿಯನ್ನು ವಶಕ್ಕೆ ಪಡೆದಿದೆ. ಇನ್ನು ಸ್ವಲ್ಪ ಮೊತ್ತ ಮಾತ್ರ ಬಾಕಿ ಇದೆ. ಹಗರಣದಲ್ಲಿ ಶಾಮೀಲಾದವರು ಎಷ್ಟೇ ದೊಡ್ಡವರಿದ್ದರೂ ಬಿಡುವುದಿಲ್ಲ. ಎಲ್ಲರನ್ನೂ ಬಂಧಿಸಿ ಜೈಲಿಗೆ ಅಟ್ಟಲಾಗುವುದು ಎಂದರು.



Join Whatsapp