ಒಂದಿಂಚು ಜಾಗವನ್ನು ಬೇರೆಯವರಿಗೆ ನೀಡಬಾರದು: ಸಿಎಂಗೆ ಶಾಸಕ ಬಂಡೆಪ್ಪ ಖಾಶೆಂಪುರ್ ಒತ್ತಾಯ

Prasthutha|

ಬೀದರ್: ಗಡಿ ವಿಷಯದಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಸಂಪೂರ್ಣ ಅಧಿಕಾರವನ್ನು ನಾವು ಮುಖ್ಯಮಂತ್ರಿಗಳಿಗೆ ನೀಡುತ್ತೇವೆ. ಅವರು ಕೂಡ ಶೀಘ್ರದಲ್ಲೇ ಸಭೆ ಕರೆದು ಒಳ್ಳೆಯ ರೀತಿಯಲ್ಲಿ ಕ್ರಮಕೈಗೊಳ್ಳಬೇಕು ಎಂದು ಮಾಜಿ ಸಚಿವ, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಖಾಶೆಂಪುರ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಒತ್ತಾಯಿಸಿದರು.

- Advertisement -


ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿರುವ ವಿಧಾನ ಸಭೆಯ ಸಭಾಂಗಣದಲ್ಲಿ ಮಂಗಳವಾರ ಎರಡನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ಗಡಿ ಪ್ರದೇಶದಲ್ಲಿನ ಸಮಸ್ಯೆಗಳ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಅವರು, ಕೇಂದ್ರ ಸರ್ಕಾರದಲ್ಲೇ ಇರಲಿ, ಸುಪ್ರೀಂ ಕೋರ್ಟ್ ನಲ್ಲಿಯೇ ಇರಲಿ ಒಳ್ಳೆಯ ರೀತಿಯಲ್ಲಿ ಲೀಡ್ ಮಾಡುವ ಮೂಲಕ ನಮ್ಮ ಪಾಲಿನ ಒಂದಿಂಚು ಜಾಗವನ್ನು ನಾವು ಬೇರೆಯವರಿಗೆ ಬಿಟ್ಟುಕೊಡದಂತೆ ನೋಡಿಕೊಳ್ಳಬೇಕು ಎಂದರು.


ಗಡಿ ತಕರಾರುಗಳ ನಿವಾರಣೆಯ ವಿಷಯದಲ್ಲಿ ಉತ್ತಮ ನ್ಯಾಯವಾದಿಗಳನ್ನು ರಾಜ್ಯ ಸರ್ಕಾರದವರು ನೇಮಕ ಮಾಡಿಕೊಳ್ಳಬೇಕು. ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷರ ಸ್ಥಾನ ಖಾಲಿ ಇದ್ದು, ಅದು ನೇಮಕ ಮಾಡಬೇಕು. ಎಲ್ಲಾ ಗಡಿ ತಜ್ಞರೊಂದಿಗೆ ಸಮಾಲೋಚನೆ ಮಾಡಬೇಕು ಎಂಬ ಜನರ ಅಭಿಪ್ರಾಯಗಳನ್ನು ಪತ್ರಿಕೆಗಳು ತಿಳಿಸಿವೆ ಎಂದರು.
ಗಡಿ ವಿಷಯವನ್ನು ಮಹಾರಾಷ್ಟ್ರ ರಾಜ್ಯದವರು ಬಹಳಷ್ಟು ಗಂಭೀರವಾಗಿ ಪರಿಗಣಿಸುತ್ತಾರೆ. ಅಲ್ಲಿನ ಮುಖ್ಯಮಂತ್ರಿಗಳು ಮೂರು ಜನರನ್ನು ಗಡಿ ಸಚಿವರು ಅಂತ ನೇಮಕ ಮಾಡುತ್ತಾರೆ. ಈ ಹಿಂದೆ ಎಚ್.ಕೆ ಪಾಟೀಲ್ ರನ್ನು ಬಾರ್ಡರ್ ಮಿನಿಷ್ಟರ್ ಅಂತ ನೇಮಕ ಮಾಡಲಾಗಿತ್ತು. ತಮ್ಮ ತಮ್ಮ ಇಲಾಖೆಗಳನ್ನು ನೋಡಿಕೊಳ್ಳುವ ಮಿನಿಷ್ಟರ್’ಗಳು ಮತ್ತು ಗೃಹ ಸಚಿವರು ಇದ್ದೇ ಇರುತ್ತಾರೆ. ಆದರೇ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಒಬ್ಬರು ಸಚಿವರು ಇದ್ದರೆ ಚೆನ್ನಾಗಿ ಇರುತ್ತದೆ ಎಂದು ಮಾಧ್ಯಮಗಳು ಹೇಳುತ್ತಿವೆ. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಯೋಚಿಸಬೇಕಾಗಿದೆ ಎಂದು ಕಾಶೆಂಪೂರ್ ಹೇಳಿದರು.

- Advertisement -


ಮುಖ್ಯಮಂತ್ರಿಗಳ ಮೇಲೆ ನಮಗೆ ವಿಶ್ವಾಸವಿದೆ. ಅವರು ಸರ್ಕಾರ ನಡೆಸುವವರಾಗಿರುತ್ತಾರೆ. ಗಡಿ ವಿಷಯದಲ್ಲಿ ನಮ್ಮ ಸರ್ಕಾರ ಯಾವುದೇ ಮುಲಾಜಿಲ್ಲದೇ ಕಠಿಣ ಕ್ರಮಕೈಗೊಳ್ಳಬೇಕಾಗಿರುತ್ತದೆ. ಗಡಿ ವಿಷಯವನ್ನು ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಸರ್ಕಾರದ ನಿರಾಶಕ್ತಿ ಹೀಗೆ ಮುಂದುವರೆದರೆ ಮುಂದೊಂದು ದಿನ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬ ಆತಂಕ ಕನ್ನಡಿಗರಲ್ಲಿ ಮನೆ ಮಾಡಿದೆ ಎಂದು ಮಾಧ್ಯಮಗಳು ತಿಳಿಸಿವೆ. ಮುಖ್ಯಮಂತ್ರಿಗಳು ಇಂತವುಗಳಿಗೆ ಅವಕಾಶ ನೀಡಬಾರದು ಎಂದು ಹೇಳಿದರು.


ಮುಖ್ಯಮಂತ್ರಿಗಳು ಸರ್ವ ಪಕ್ಷ ಸಭೆ ಕರೆಯುತ್ತೇನೆ ಎಂದಿದ್ದಾರೆ. ಸಭೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಒಳ್ಳೊಳ್ಳೆ ವಕೀಲರನ್ನು ನೇಮಿಸಬೇಕು. ಗಡಿ ತಜ್ಞರ ಸಲಹೆ ತೆಗೆದುಕೊಳ್ಳಬೇಕು. ಕನ್ನಡ ಪರ ಹೋರಾಟಗಾರರನ್ನು, ರಕ್ಷಣಾ ವೇದಿಕೆಯವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಸರ್ಕಾರ ಮಾಡಬೇಕು.
ಈ ಹಿಂದೆ 2006ರಲ್ಲಿ ಹೆಚ್.ಡಿ ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿದ್ದರು. ಅವರು ದೇವೇಗೌಡರ ಮಾರ್ಗದರ್ಶನದಲ್ಲಿ ಮಹಾರಾಷ್ಟ್ರದ ನಾಗಪೂರದಲ್ಲಿ ನಡೆಯುವ ಅಧಿವೇಶನದಂತೆ ಉತ್ತರ ಕರ್ನಾಟಕದ ಪ್ರಮುಖ ನಗರವಾದ ಬೆಳಗಾವಿಯಲ್ಲಿ ಅಧಿವೇಶನ ಆರಂಭಿಸಿದ್ದರು. ಆ ಮೂಲಕ ಅವರು ಬೆಳಗಾವಿ ಕರ್ನಾಟಕದ ಎರಡನೇ ಶಕ್ತಿ ಕೇಂದ್ರ ಎಂದು ತೋರಿಸಿಕೊಟ್ಟಿದ್ದರು.


ಸುವರ್ಣ ಸೌಧಕ್ಕೆ ಅವರೇ ಚಾಲನೆ ನೀಡಿದ್ದರು. ಯಡಿಯೂರಪ್ಪರವರು ಪೂರ್ಣಗೊಳಿಸಿದ್ದರು. ಇಲ್ಲಿನ ಜನರಿಗೆ ಶಕ್ತಿ ಕೊಡಬೇಕು ಎಂಬ ನಿಟ್ಟಿನಲ್ಲಿ ಅಂದು ಆ ನಿರ್ಧಾರಗಳನ್ನು ಮಾಡಿದ್ದರು. ನಾವು ಯಾವುದಕ್ಕೂ ಕಮ್ಮಿ ಇಲ್ಲ ಎಂದು ತೋರಿಸಿಕೊಟ್ಟಿದ್ದರು. ಮುಂದಿನ ದಿನಗಳಲ್ಲಿ ನಮ್ಮ ಕರ್ನಾಟಕದ ಒಂದಿಂಚು ಜಾಗವನ್ನು ನಾವು ಬಿಡದಂತೆ ಡಬಲ್ ಇಂಜೀನ್ ಸರ್ಕಾರ ಕೆಲಸ ಮಾಡಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸದನದಲ್ಲಿ ಹೇಳಿದರು.



Join Whatsapp