ನೂರ್ ಜಹಾನ್ ಬಂಧನ ರಾಜಕೀಯ ಪ್ರೇರಿತ: ವಿಮೆನ್ ಇಂಡಿಯಾ ಮೂವ್ ಮೆಂಟ್

Prasthutha|

ಮಂಗಳೂರು: ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಪ್ರಕರಣದಲ್ಲಿ ನೂರ್ ಜಹಾನ್ ಎಂಬ ಮಹಿಳೆಯನ್ನು ಬಂಧಿಸಿರುವುದು ರಾಜಕೀಯ ಪ್ರೇರಿತ ಸುಳ್ಳು ಆಪಾದನೆ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತ ನೂರ್ ಜಹಾನ್ ಮತಾಂತರಕ್ಕೆ ಯತ್ನ ನಡೆಸಿಲ್ಲ. ಇದೊಂದು ರಾಜಕೀಯ ಪ್ರೇರಿತ ಸುಳ್ಳು ಆಪಾದನೆಯಾಗಿದೆ. ಅವರು ಸಾವನ್ನಪ್ಪಿದ ವಿಜಯಲಕ್ಷ್ಮಿ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ ನೆರವು, ಸಹಕಾರ ನೀಡಿದ್ದಾರೆ. ಆದರೆ ಪೊಲೀಸರು ರಾಜಕೀಯ ಮತ್ತು ಸಂಘಪರಿವಾರದ ಒತ್ತಡಕ್ಕೆ ಮಣಿದು ನೂರ್ ಜಹಾನ್ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದರು.


ನಾಗೇಶ್-ವಿಜಯಲಕ್ಷ್ಮೀ ದಂಪತಿ ಸಾವಿಗೆ ಸಂಬಂಧಿಸಿದಂತೆ ನೂರ್ ಜಹಾನ್ ಎಂಬವರ ಮೇಲೆ ಹೊರಿಸಿರುವ ಆರೋಪ ಸ್ವೀಕಾರ್ಹವಲ್ಲ, ವಿಜಯಲಕ್ಷ್ಮೀಯ ಗಂಡ ನಾಗೇಶ್, ಮದ್ಯವ್ಯಸನಿಯಾಗಿದ್ದು, ಆಕೆಗೆ ಕಿರುಕುಳ ನೀಡುತ್ತಿದ್ದ ಎಂಬ ವಿಚಾರ ಈಗಾಗಲೇ ಸುದ್ದಿಯಾಗಿದೆ. ಅಲ್ಲದೇ, ಈ ಹಿಂದೆ ಆ ದಂಪತಿ ಕೆಲಸ ಮಾಡಿಕೊಂಡಿದ್ದ ವಸತಿ ಸಂಕೀರ್ಣದ ನಿವಾಸಿಗಳಿಗೂ ಈ ಕೌಟುಂಬಿಕ ಕಲಹದ ವಿಚಾರ ತಿಳಿದಿರುವುದೇ ಆಗಿದೆ. ಗಂಡನ ಕಿರುಕುಳದ ಕಾರಣದಿಂದ ಇತ್ತೀಚಿಗೆ ವಿಜಯಲಕ್ಷ್ಮೀ ಮನೆ ತೊರೆದಿದ್ದಳು ಮತ್ತು ಇದರ ಬಗ್ಗೆ ಪೊಲೀಸ್ ಠಾಣೆಗೆ ದೂರನ್ನೂ ನೀಡಿದ್ದಳು. ಇವೆಲ್ಲದರ ಮಧ್ಯೆ ನೂರ್ ಜಹಾನ್ ವಾಸವಿದ್ದ ವಸತಿ ಸಂಕೀರ್ಣದಲ್ಲಿ ನಾಗೇಶ್-ವಿಜಯಲಕ್ಷ್ಮೀ ದಂಪತಿ ಸ್ವಚ್ಛತೆ ಮತ್ತು ಕಾವಲುಕಾಯುವ ಕೆಲಸ ಮಾಡಿಕೊಂಡಿದ್ದು, ಇದೇ ವೇಳೆ ನೂರ್ ಜಹಾನ್ ಪರಿಚಯವಾಗಿದೆ. ವಿಜಯಲಕ್ಷ್ಮೀ ತನ್ನ ಗಂಡನ ಕಿರುಕುಳ ಮತ್ತು ಜೀವನ ನಿರ್ವಹಣೆಗೆ ಪಡುತ್ತಿದ್ದ ಸಂಕಷ್ಟವನ್ನು ನೂರ್ ಜಹಾನ್ ರೊಂದಿಗೆ ತೋಡಿಕೊಂಡ ಕಾರಣಕ್ಕಾಗಿ ಅವರು ಮಾನವೀಯ ನೆಲೆಯಲ್ಲಿ ಕೈಲಾದಷ್ಟು ಸಹಾಯ ಮಾಡುತ್ತಿದ್ದರು. ಗಂಡನ ಹಿಂಸೆಯಿಂದ ಬೇಸತ್ತು ವಿಜಯಲಕ್ಷ್ಮೀ ಕೆಲ ದಿನಗಳ ವರೆಗೆ ಮನೆಯನ್ನೂ ತೊರೆದಿದ್ದಳು ಮತ್ತು ಅದೇ ಸಂದರ್ಭದಲ್ಲಿ ಗೃಹ ದೌರ್ಜನ್ಯದ ವಿರುದ್ಧ ಪಾಂಡೇಶ್ವರದ ಮಹಿಳಾ ಪೊಲೀಸ್ ಠಾಣೆಯಲ್ಲಿ ವಿಜಯಲಕ್ಷ್ಮಿ ದೂರು ದಾಖಲಿಸಿದ್ದರು. ವಿಜಯಲಕ್ಷ್ಮೀ ಗೃಹ ಹಿಂಸೆಗೆ ಒಳಗಾದ ಓರ್ವ ಸಂತ್ರಸ್ತೆಯಾಗಿದ್ದಾಳೆ ಮತ್ತು ನೂರ್ ಜಹಾನ್ ಓರ್ವ ಜವಾಬ್ದಾರಿಯುತ ನಾಗರಿಕರಾಗಿ ಆಕೆಗೆ ನೆರವು ನೀಡಿದ್ದಾರೆ ಎಂದು ಅವರು ತಿಳಿಸಿದರು.

- Advertisement -


ಪತ್ನಿ ತನ್ನನ್ನು ತೊರೆಯಬಹುದು ಎಂಬ ಆತಂಕದಿಂದ ಖಿನ್ನತೆಗೊಳಗಾಗಿ ಹಂತಕ ನಾಗೇಶ್ ಈ ದುಷ್ಕೃತ್ಯ ನಡೆಸಿರಬಹುದು, ಅಂತೆಯೇ ನೆರವು ನೀಡಿದ ಕಾರಣಕ್ಕಾಗಿ ದ್ವೇಷ ಸಾಧಿಸಲು ನೂರ್ ಜಹಾನ್ ವಿರುದ್ಧ ಮತಾಂತರದ ಸುಳ್ಳಾರೋಪವನ್ನು ತನ್ನ ಡೆತ್ ನೋಟ್ ನಲ್ಲಿ ಪ್ರಸ್ತಾಪಿಸಿರಬಹುದು. ಆದರೆ ಸದ್ಯದ ಪೊಲೀಸ್ ತನಿಖೆಯು ಸಂಘಪರಿವಾರದ ಒತ್ತಡಕ್ಕೆ ಮಣಿದು ಏಕಪಕ್ಷೀಯವಾಗಿ ಸಾಗುತ್ತಿರುವುದು ಕಂಡು ಬರುತ್ತಿದೆ. ದೌರ್ಜನ್ಯಕ್ಕೊಳಗಾದ ಹೆಣ್ಣಿಗೆ ನೆರವು ನೀಡುವುದು ಮಾನವ ಸಹಜ ಗುಣ, ಆದರೆ ಸಂತ್ರಸ್ತ ಹೆಣ್ಣಿಗೆ ಬೆಂಗಾವಲಾಗಿ ನಿಂತ ಮಹಿಳೆಯೋರ್ವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಸಮಾಜಕ್ಕೆ ಎಂತಹ ಸಂದೇಶ ರವಾನಿಸಲಾಗುತ್ತಿದೆ ಎಂಬುದರ ಬಗ್ಗೆ ಅವಲೋಕಿಸಬೇಕು. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಸಂತ್ರಸ್ತ ಹೆಣ್ಣಿಗೆ ನೆರವು ನೀಡಲು ಯಾರೂ ಮುಂದೆ ಬರಲಾರದ ಸನ್ನಿವೇಶ ನಿರ್ಮಾಣವಾಗಬಹುದು ಎಂದು ಶಾಹಿದಾ ತಸ್ನೀಂ ತಿಳಿಸಿದರು.


ಪೊಲೀಸ್ ಇಲಾಖೆ ಹೆಂಡತಿ ಮಕ್ಕಳನ್ನು ಕೊಂದು ಕ್ರೌರ್ಯ ಮೆರೆದ ನಾಗೇಶ್ ನನ್ನು ಅಮಾಯಕನಾಗಿ ಬಿಂಬಿಸಿದೆ. ಧರ್ಮ ಪ್ರಚಾರ ನಡೆಸುವ ಯಾವುದೇ ಹಿನ್ನೆಲೆ ನೂರ್ ಜಹಾನ್ ಗೆ ಇಲ್ಲ. ಮತಾಂತರದ ಹೆಸರಲ್ಲಿ ಸ್ಥಾಪಿತ ಹಿತಾಸಕ್ತಿಗಳು ಮುಸ್ಲಿಂ ಕ್ರೈಸ್ತರನ್ನು ನಿರಂತರವಾಗಿ ಗುರಿಪಡಿಸುತ್ತಿವೆ. ಈ ಬಗ್ಗೆ ಇಲಾಖೆ ನಿಷ್ಪಕ್ಷಪಾತ ತನಿಖೆ ನಡೆಸಬೇಕಿದೆ. ಡೆತ್ ನೋಟ್ ಹೆಸರಲ್ಲಿ ನೂರ್ ಜಹಾನ್ ಕುಟುಂಬಕ್ಕೆ ಕಿರುಕುಳ ನೀಡುವುದು ನಿಲ್ಲಿಸಿ ಅವರನ್ನು ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವಿಮ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆಯಿಶಾ ಬಜ್ಪೆ, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಸಂಶಾದ್ ಅಬೂಬಕರ್, ಮಲ್ಲೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೇಮಾ ಮಲ್ಲೂರು ಉಪಸ್ಥಿತರಿದ್ದರು.



Join Whatsapp