ಅಬುಧಾಬಿ: ಕರ್ನಾಟಕದ ದೇವಸ್ಥಾನಗಳ ಬಳಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರುತ್ತಿರುವ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಸದ್ದು ಮಾಡುತ್ತಿದೆ. ಹಿಂದುತ್ವ ಶಕ್ತಿಗಳು ಮುಸ್ಲಿಮರ ವ್ಯಾಪಾರವನ್ನು ತಡೆಯುತ್ತಿರುವ ಕುರಿತು ಯುನೈಟೆಡ್ ಅರಬ್ ಎಮಿರೇಟ್ಸ್(UAE)ನ ರಾಜಕುಮಾರಿ ಹೆಂದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. `ಅರಬ್ ರಾಷ್ಟ್ರಗಳಲ್ಲಿ ಅಸಂಖ್ಯಾತ ಹಿಂದೂಗಳಿದ್ದಾರೆ, ಅವರನ್ನು ಮಸೀದಿಯ ಬಳಿ ವ್ಯಾಪಾರ ಮಾಡುವಂತೆ ಎಲ್ಲಾದರೂ ತಡೆಯಲಾಗಿದೆಯಾ’ ಎಂದು ಪ್ರಶ್ನಿಸುವ ಮೂಲಕ ಹಿಂದುತ್ವ ಶಕ್ತಿಗಳಿಗೆ ಚಾಟಿ ಬೀಸಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಅವರು, ಕೆಲವು ಮುಸ್ಲಿಮ್ ರಾಷ್ಟ್ರಗಳಲ್ಲಿ ವಾಸಿಸುವ ಹಿಂದೂಗಳ ಸಂಖ್ಯೆಯನ್ನು ಅಂಕಿ ಅಂಶಗಳೊಂದಿಗೆ ಬಹಿರಂಗಪಡಿಸಿದ್ದಾರೆ.
ಕೆಲವು ಮುಸ್ಲಿಂ ರಾಷ್ಟ್ರಗಳಲ್ಲಿ ವಾಸಿಸುವ ಹಿಂದೂಗಳ ಸಂಖ್ಯೆ ಇಂತಿವೆ:
1.ಇಂಡೋನೇಷ್ಯಾ- 4, 480,000, 2.ಮಲೇಷ್ಯಾ- 2, 040,000, 3.UAE- 9, 10,000, 4.ಕತಾರ್-3, 60,000, 5.ಬಹ್ರೇನ್-2, 40,000, 6.ಕುವೈತ್-6, 30,000, 7.ಓಮನ್-6, 50,000, 8.ಸೌದಿ -3, 70,000.
ಈ ಮೇಲಿನ ಯಾವುದೇ ರಾಷ್ಟ್ರಗಳಲ್ಲಿರುವ ಹಿಂದೂಗಳಿಗೆ ಮಸೀದಿ ಆವರಣದಲ್ಲಿ ವ್ಯಾಪಾರ ಮಾಡುವುದನ್ನು ಇದುವರೆಗೂ ನಿರ್ಬಂಧ ವಿಧಿಸಿಲ್ಲ ಎಂದು ಅವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಸದ್ಯ ಕರ್ನಾಟಕದಲ್ಲಿ ದೇವಾಲಯದಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ನಿರ್ಬಂಧ ಹೇರಬೇಕೆಂದು ಆಗ್ರಹಿಸುತ್ತಿರುವ ಸಂಘಪರಿವಾರದ ನಡೆಯನ್ನು ವಿರೋಧಿಸಿ ಯುಎಇ ರಾಜಕುಮಾರಿ ಹೆಂದ್ ಅವರ ಟ್ವೀಟ್ ಸಾಕಷ್ಟು ಕುತೂಹಲ ಸೃಷ್ಟಿಸಿದೆ.