ಕೋವಿಡ್ ಮಾರ್ಗಸೂಚಿ ಉಲ್ಲಂಘನೆ: ಖಂಡ್ರೆಗೆ ಜಾಮೀನು ರಹಿತ ಬಂಧನ ವಾರೆಂಟ್

Prasthutha|

ಬೆಂಗಳೂರು: ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಆರೋಪ ಸಂಬಂಧ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಾಗೂ ಮುಖಂಡರಾದ ಎನ್ ಎಸ್ ಮಂಜುನಾಥ್ ಮತ್ತು ಬಸವನಗೌಡ ಬಾದರ್ಲಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ.

- Advertisement -


ನಾರಾಯಣಿ ಎಂಬವರು ಸಲ್ಲಿಸಿದ್ದ ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಸಿದ ನಗರದ 42ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಹಾಗೂ ಹಾಲಿ ಮತ್ತು ಮಾಜಿ ಶಾಸಕರ ಪ್ರಕರಣಗಳ ವಿಚಾರಣೆ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಜೆ ಪ್ರೀತ್ ಆದೇಶ ಮಾಡಿದ್ದಾರೆ.


ಪ್ರಕರಣದಲ್ಲಿ ಮೊದಲನೇ ಆರೋಪಿಯಾದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪರ ವಕೀಲರು ವಿಚಾರಣೆಗೆ ಹಾಜರಾಗಿ, ಡಿ ಕೆ ಶಿವಕುಮಾರ್ ಅವರಿಗೆ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದರು. ಇದನ್ನು ಪರಿಗಣಿಸಿದ ನ್ಯಾಯಾಲಯವು ಈ ಕುರಿತು ಏಪ್ರಿಲ್‌ 27ರಂದು ನಡೆಯುವ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ಡಿ ಕೆ ಶಿವಕುಮಾರ್ ಅವರಿಗೆ ನಿರ್ದೇಶಿಸಿದೆ.
ಈ ಮಧ್ಯೆ, ಕಳೆದ ವಿಚಾರಣೆ ವೇಳೆ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸಿದ್ದ ಹಿನ್ನೆಲೆಯಲ್ಲಿ ಪ್ರಕರಣದ ಇತರೆ ಆರೋಪಿಗಳಾಗಿರುವ ಶಫೀವುಲ್ಲಾ ಮತ್ತು ಸಲೀಂ ಮುಹಮ್ಮದ್ ಅವರು ಬುಧವಾರ ವಿಚಾರಣೆಗೆ ಖುದ್ದು ಹಾಜರಾಗಿದ್ದರು. ಅದನ್ನು ಪರಿಗಣಿಸಿದ ನ್ಯಾಯಾಲಯವು ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದು, ತಲಾ ಐದು ಸಾವಿರ ರೂಪಾಯಿ ಭದ್ರತಾ ಠೇವಣಿ ಇಡುವಂತೆ ಆದೇಶಿಸಿದೆ.

- Advertisement -


ನ್ಯಾಯಾಲಯದ ಆದೇಶದ ಹೊರತಾಗಿಯೂ ಬುಧವಾರವೂ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಈಶ್ವರ್ ಖಂಡ್ರೆ, ಎನ್ ಎಸ್ ಮಂಜುನಾಥ್ ಮತ್ತು ಬಸವನಗೌಡ ಬಾದರ್ಲಿಗೆ ಮತ್ತೆ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸಿ ನ್ಯಾಯಾಲಯ ಆದೇಶಿಸಿದೆ.


ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಆರೋಪ ಸಂಬಂಧ ಡಿ ಕೆ ಶಿವಕುಮಾರ್, ಈಶ್ವರ್ ಖಂಡ್ರೆ, ಎನ್ ಎಸ್ ಮಂಜುನಾಥ್, ಬಸವನಗೌಡ ಬಾದರ್ಲಿ, ಶಫೀವುಲ್ಲಾ ಮತ್ತು ಸಲೀಂ ಮುಹಮ್ಮದ್ ವಿರುದ್ಧ ವಿಪತ್ತು ನಿರ್ವಹಣಾ ಕಾಯಿದೆ ಅಡಿ ನಾರಾಯಣಿ ಎಂಬುವವರು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಮಾರ್ಚ್‌ 23ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ ಎಲ್ಲಾ ಆರೋಪಿಗಳಿಗೂ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿತ್ತು.



Join Whatsapp