ಪೌರ ಕಾರ್ಮಿಕರನ್ನು ಖಾಯಂಗೊಳಸಿ; ಮೈಸೂರು ನಾರಾಯಣ ಅವರನ್ನು ವಿಧಾನಪರಿಷತ್ತಿಗೆ ನಾಮಕರಣ ಮಾಡಿ: ಪೌರಕಾರ್ಮಿಕರ ಮಹಾ ಸಂಘ ಆಗ್ರಹ

Prasthutha|

 ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರು ಹಾಗೂ ಮೇಲ್ವಿಚಾರಕರನ್ನು ಖಾಯಂಗೊಳಿಸುವ ಕುರಿತು ರಾಜ್ಯ ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ. ವಿಧಾನಮಂಡಲ ಅಧಿವೇಶನದಲ್ಲಿ ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾನ ನೀಡಬೇಕು ಎಂದು ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾ ಸಂಘ ಆಗ್ರಹಿಸಿದೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೌರಕಾರ್ಮಿಕರ ಮಹಾಸಂಘದ ಬೆಂಗಳೂರು ನಗರ ಅಧ್ಯಕ್ಷ ಬಿ.ಎಂ.ಸುರೇಶ್ ಬಾಬು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಅಂಜನೇಯಲು, ಬಜೆಟ್ ನಲ್ಲಿ ಖಾಯಂ ಬಗ್ಗೆ ಏನನ್ನೂ ಹೇಳಿಲ್ಲ. ನೇರ ವೇತನ ಪೌರಕಾರ್ಮಿಕರಿಗೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ದಲಿತರು ಮತ್ತು ಶೋಷಿತರ ಬೆಂಬಲದಿಂದ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ರಾಜ್ಯದ ಪೌರ ಕಾರ್ಮಿಕರ ಹಿತ ರಕ್ಷಣೆಗೆ ಯಾವುದೇ ಕಾರ್ಯಕ್ರಮ ಪ್ರಕಟಿಸಿಲ್ಲ. ಸ್ವಚ್ಛತಾ ರಾಯಭಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವವರ ಹಿತ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದರು.

ಪೌರಕಾರ್ಮಿರ ಪರವಾಗಿ ನಿರಂತರ ಹೋರಾಟ ಮಾಡುತ್ತಿರುವ ಸಂಘದ ರಾಜ್ಯಾಧ್ಯಕ್ಷ ನಾರಾಯಣ(ಮೈಸೂರು) ಅವರನ್ನು ವಿಧಾನಪರಿಷತ್ತಿಗೆ ನಾಮಕರಣ ಮಾಡಬೇಕು. ಇಲ್ಲವಾದಲ್ಲಿ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಿಸಿದರೆ ಪೌರ ಕಾರ್ಮಿಕರ ಹಿತ ರಕ್ಷಣೆ ಸಾಧ್ಯವಾಗಲಿದೆ. ನಾರಾಯಣ ಅವರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು.

- Advertisement -

 ಸುದ್ದಿಗೋಷ್ಠಿಯಲ್ಲಿ ಪೌರಕಾರ್ಮಿಕರ ಮಹಾಸಂಘದ ರಾಜ್ಯ ಕಾರ್ಯಾಧ್ಯಕ್ಷ ಎಂ.ನಾಗರಾಜು (ಹೆಬ್ಬಾಳ), ಬೆಂ. ನಗರ ಉಪಾಧ್ಯಕ್ಷರಾದ ಎಂ.ಜಿ. ಶ್ರೀನಿವಾಸ್  ಬೆಂ. ನಗರ ಉಪಾಧ್ಯಕ್ಷ ಡಿ.ಸುಧಾಕರ್, ಬೆಂ.ನಗರ ಕಾರ್ಯಾಧ್ಯಕ್ಷ ಎಸ್.ವೆಂಕಟೇಶ್ವರಲು,  ಬೆಂ.ನಗರ ಕಾರ್ಯಧ್ಯಕ್ಷ ಹೆಚ್.ಬಿ.ಶೇಖರ್, ಬೆಂ.ನಗರ ಮಹಿಳಾ ಅಧ್ಯಕ್ಷೆ ಶ್ರೀಮತಿ.ಲಕ್ಷಮ್ಮ, ಸಹ ಪ್ರಧಾನ ಕಾರ್ಯದರ್ಶಿ ಗಂಗಣ್ಣ, ಬೆಂ.ನಗರ ಕಾರ್ಯದರ್ಶಿ ಬಿ. ಆನಂದಕುಮಾರ್, ಬೆಂ.ನಗರ ಸಂಘನಾ ಕಾರ್ಯದರ್ಶಿ ಎಸ್.ಆರ್.ವೆಂಕಟೇಶ್ ಭಾಗವಹಿಸಿದ್ದರು.