ಬೆಂಗಳೂರು: ಧಾರ್ಮಿಕ ಸ್ಥಳಗಳಲ್ಲಿ ಆಂಪ್ಲಿಫೈಯರ್ ಮತ್ತು ಧ್ವನಿವರ್ಧಕಗಳನ್ನು ಅಕ್ರಮವಾಗಿ ಬಳಸುವುದಕ್ಕೆ ಸಂಬಂಧಿಸಿದಂತೆ ಕೇವಲ ಒಂದು ಧರ್ಮವನ್ನು ಗುರಿಯಾಗಿಸಲು ಅವಕಾಶ ನೀಡಲಾಗದು ಎಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠವು ಸದುದ್ದೇಶದ ಕೊರತೆ ಇರುವುದಕ್ಕೆ ಇಂತಹ ಆಯ್ದ ದಾಳಿ ಸಾಕ್ಷಿ ಎಂದು ಮೌಖಿಕವಾಗಿ ತಿಳಿಸಿತು. “ಈ ಉಲ್ಲಂಘನೆ ಕೇವಲ ಒಂದು ಧರ್ಮದಿಂದ ಆಗಿರಲಿಕ್ಕೆ ಸಾಧ್ಯವಿಲ್ಲ. ನೀವು ಕೇವಲ ಒಂದು ಧರ್ಮವನ್ನು ಗುರಿಯಾಗಿಸಿಕೊಂಡಿದ್ದರೆ, ಅದು ನಿಮ್ಮ ಸದುದ್ದೇಶದ ಕೊರತೆಯನ್ನು ತೋರಿಸುತ್ತದೆ.” ಎಂದು ಪೀಠ ಹೇಳಿದೆ.
ಶಬ್ದ ಮಾಲಿನ್ಯ ನಿಯಮಾವಳಿ-2000 ಅನ್ನು ಉಲ್ಲಂಘಿಸಿ ಧಾರ್ಮಿಕ ಸ್ಥಳಗಳಲ್ಲಿ ಆಂಪ್ಲಿಫಯರ್ ಮತ್ತು ಧ್ವನಿವರ್ಧಕಗಳನ್ನು ಅಕ್ರಮವಾಗಿ ಬಳಸುವುದರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೋರಿ ಸಲ್ಲಿಸಲಾದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲ ಬಿ ಎನ್ ಜಗದೀಶ್, “ನಾನು ಹಿಂದೂ ಧಾರ್ಮಿಕ ಸಂಸ್ಥೆಗಳಲ್ಲಿ ಕೂಡ (ನಿಯಮ) ಉಲ್ಲಂಘನೆಯಾಗಿರುವುದರ ಕುರಿತು ಗಮನಸೆಳೆದಿದ್ದೇನೆ. ಧಾರ್ಮಿಕ ಸಂಸ್ಥೆಗಳಿಂದ ಧ್ವನಿವರ್ಧಕ ಬಳಕೆ ತಡೆಯುವಂತೆ ಮನವಿ ಸಲ್ಲಿಸಲಾಗಿದೆ.” ಎಂದರು. ಆಗ ಮಧ್ಯಪ್ರವೇಶಿಸಿದ ನ್ಯಾಯಾಲಯ “ಅದು ನಿಮ್ಮ ವರ್ತನೆಯಿಂದ ಪ್ರತಿಫಲಿಸಬೇಕು” ಎಂದಿತು. ನಂತರ ಅರ್ಜಿದಾರರು ಧಾರ್ಮಿಕ ಸಂಸ್ಥೆಗಳು ಶಬ್ದ ಮಾಲಿನ್ಯ ನಿಯಮ ಉಲ್ಲಂಘಿಸಿದ ವಿವಿಧ ನಿದರ್ಶನಗಳನ್ನು ತೋರಿಸಿದರು.
ಈ ಸಂಬಂಧ ಕ್ರಮ ಕೈಗೊಳ್ಳಲು ಪರಿಸರ (ಸಂರಕ್ಷಣೆ) ಕಾಯಿದೆ 1986ರ ಸೆಕ್ಷನ್ 19 (ಎ) ಅಡಿಯಲ್ಲಿ ಸಹಾಯಕ ಪೊಲೀಸ್ ಕಮಿಷನರ್ ಅವರಿಗೆ ಅಧಿಕಾರ ನೀಡಲಾಗಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತು. ಈ ಹಂತದಲ್ಲಿ ನ್ಯಾಯಾಲಯ ಇದಕ್ಕೆ ಸಂಬಂಧಿಸಿದ ಸುತ್ತೋಲೆಯನ್ನು ದಾಖಲೆಯಲ್ಲಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಹಿರಿಯ ಅಧಿಕಾರಿಯೊಬ್ಬರು ಧಾರ್ಮಿಕ ಸ್ಥಳಗಳಲ್ಲಿ ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿದ ಅಹವಾಲುಗಳನ್ನು ನಿಭಾಯಿಸಿದ ರೀತಿ ಬಗ್ಗೆ ಕಳೆದ ಏಪ್ರಿಲ್‌ನಲ್ಲಿ, ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಪೀಠ, ಅಂತಹ ದೂರುಗಳನ್ನು ನಿರ್ವಹಿಸುವಾಗ ಮಂಡಳಿ ʼಪೋಸ್ಟ್‌ಮ್ಯಾನ್ʼ ರೀತಿ ವರ್ತಿಸುತ್ತಿದೆ ಎಂದಿತ್ತು.
ಘಟನೆಗೆ ಸಂಬಂಧಿಸಿದಂತೆ ಹಿರಿಯ ಪರಿಸರ ಅಧಿಕಾರಿಯ ಪಾತ್ರ ಪರಿಶೀಲಿಸಿ ಈ ನಿಟ್ಟಿನಲ್ಲಿ ಅಫಿಡವಿಟ್ ಸಲ್ಲಿಸುವಂತೆ ಮಂಡಳಿಯ ಅಧ್ಯಕ್ಷರಿಗೆ ಪೀಠ ಸೂಚಿಸಿತ್ತು. ಆದರೆ ಅಧ್ಯಕ್ಷರು ಇನ್ನೂ ಅಫಿಡವಿಟ್ ಸಲ್ಲಿಸಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ ಬಳಿಕ ಅಫಿಡವಿಟ್ ಸಲ್ಲಿಸಲು ಅಧ್ಯಕ್ಷರಿಗೆ ಇನ್ನೂ ಎರಡು ವಾರಗಳ ಕಾಲಾವಕಾಶ ನೀಡಿತು. ಅದನ್ನು ಉಲ್ಲಂಘಿಸಿದರೆ ಸಿವಿಲ್ ಮಾನನಷ್ಟ ಮೊಕದ್ದಮೆ ಎದುರಿಸಬೇಕಾದೀತು ಎಂದು ಎಚ್ಚರಿಸಿತ್ತು. ಜುಲೈ 30ಕ್ಕೆ ಮತ್ತೆ ಪ್ರಕರಣದ ವಿಚಾರಣೆ ನಿಗದಿಯಾಗಿದೆ.
(ಕೃಪೆ: ಬಾರ್ ಆ್ಯಂಡ್ ಬೆಂಚ್)