ಮಹಾರಾಷ್ಟ್ರದಲ್ಲಿ ಧ್ವನಿವರ್ಧಕ ನಿಯಮ ಉಲ್ಲಂಘನೆ ಆಗಿಲ್ಲ: ಶಿವಸೇನೆ ಸಂಸದ ಸಂಜಯ್ ರಾವತ್ ಕಿಡಿ

Prasthutha|

ಮುಂಬೈ: ಮಹಾರಾಷ್ಟ್ರದಲ್ಲಿ ಯಾವುದೇ ಧ್ವನಿವರ್ಧಕ ಮಾರ್ಗಸೂಚಿಗಳ ಉಲ್ಲಂಘನೆಯಾಗಿಲ್ಲ ಎಂದು ತಿಳಿಸಿದ ಶಿವಸೇನೆ ಸಂಸದ ಸಂಜಯ್ ರಾವತ್, ತಮ್ಮ ಪಕ್ಷಕ್ಕೆ ಯಾರೂ ಹಿಂದುತ್ವವನ್ನು ಕಲಿಸುವ ಅಗತ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

- Advertisement -

ಬಿಜೆಪಿ ಮತ್ತು MNS ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು, ನಕಲಿ ಹಿಂದುತ್ವವಾದಿಗಳ ಬೆಂಬಲದೊಂದಿಗೆ ಶಿವಸೇನೆಯ ವಿರುದ್ಧ ಪಿತೂರಿ ಮಾಡುವವರನ್ನು ಜನರು ಪರಿಗಣಿಸುವುದಿಲ್ಲ ಎಂದು ರಾವತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಮಧ್ಯೆ MNS ಮುಖ್ಯಸ್ಥ ರಾಜ್ ಠಾಕ್ರೆ ಅವರು ಆಡಳಿತಾರೂಢ ಶಿವಸೇನೆಯನ್ನು ಗುರಿಯಾಗಿಸಿಕೊಂಡು ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ತೆಗೆಸುವಂತೆ ಕರೆ ನೀಡಿದ್ದಾರೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿದ ರಾವತ್, ‘ಮಹಾರಾಷ್ಟ್ರದಲ್ಲಿ ಯಾವುದೇ ಧ್ವನಿವರ್ಧಕಗಳ ಮಾರ್ಗಸೂಚಿಯನ್ನು ಉಲ್ಲಂಘಿಸಲಾಗಿಲ್ಲ. ಸುಪ್ರೀಮ್ ಕೋರ್ಟ್ ನೀಡಿರುವ ಧ್ವನಿವರ್ಧಕ ಮಾರ್ಗಸೂಚಿಗಳ ಆಧಾರದಲ್ಲಿ ರಾಜ್ಯ ಕಾರ್ಯನಿರ್ವಹಿಸುತ್ತಿದೆ. ಇದನ್ನು ಮುಂದಿಟ್ಟುಕೊಂಡು ಯಾರಾದರೂ ಕಾನೂನನ್ನು ಉಲ್ಲಂಘಿಸಿದರೆ ಸರ್ಕಾರ ಅದನ್ನು ಸಮರ್ಥವಾಗಿ ನಿಭಾಯಿಸಲಿದೆ ಎಂದು ತಿಳಿಸಿದ್ದಾರೆ.

ಮುಂಬೈ ಅಥವಾ ಮಹಾರಾಷ್ಟ್ರದಲ್ಲಿ ಆಂದೋಲನ (ಲೌಡ್ ಸ್ಪೀಕರ್ ವಿಚಾರದಲ್ಲಿ) ಅಗತ್ಯವಿರುವ ಮಟ್ಟಕ್ಕೆ ಪರಿಸ್ಥಿತಿ ತಲುಪಿಲ್ಲ. ಎಲ್ಲಾ ಮಸೀದಿಗಳು ಧ್ವನಿವರ್ಧಕಗಳ ಬಳಕೆಗೆ ಅನುಮತಿಯನ್ನು ಪಡೆದಿವೆ ಎಂದು ರಾಜ್ಯಸಭಾ ಸದಸ್ಯರೊಬ್ಬರು ಈ ಹಿಂದೆ ತಿಳಿಸಿದ್ದರು.

ತಮ್ಮ ಪಕ್ಷ ಅಧಿಕಾರಕ್ಕೇರಿದರೆ ರಸ್ತೆಗಳಲ್ಲಿ ನಮಾಝ್ ನಿರ್ವಹಿಸುವುದನ್ನು ನಿಲ್ಲಿಸಲಾಗುವುದು ಮತ್ತು ಮಸೀದಿಗಳಿಂದ ಧ್ವನಿವರ್ಧಕ ತೆರವುಗೊಳಿಸಲಾಗುವುದೆಂದು ಹೇಳುತ್ತಿರುವ ಶಿವಸೇನಾ ಸಂಸ್ಥಾಪಕ ದಿವಂಗತ ಬಾಳ್ ಠಾಕ್ರೆ ಅವರ ಹಳೆಯ ವೀಡಿಯೋವೊಂದನ್ನು MNS ಮುಖ್ಯಸ್ಥ ರಾಜ್ ಠಾಕ್ರೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ರಾವತ್, ನಾವು ಅಷ್ಟು ಕೀಳುಮಟ್ಟಕ್ಕೆ ಇಳಿದಿಲ್ಲ. ನಾವೂ ಈಗಲೂ ಅವರ ತತ್ವಗಳ ಅಧಾರದಲ್ಲೇ ನಡೆಯುತ್ತೇವೆ. ಬಾಳ್ ಠಾಕ್ರೆ ಅವರು ಧ್ವನಿವರ್ಧಕ ಮತ್ತು ರಸ್ತೆಯಲ್ಲಿ ನಮಾಝ್ ನಿರ್ವಹಿಸು ಕುರಿತು ಸ್ಪಷ್ಟ ನಿಲುವು ತಳೆದಿದ್ದರು. ಅಧಿಕಾರಕ್ಕೆ ಬಂದ ನಂತರ ಅದನ್ನು ನಿಲ್ಲಿಸಿದ್ದಾರೆ. ಶಿವಸೇನೆಗೆ ಯಾರೂ ಹಿಂದುತ್ವವನ್ನು ಕಲಿಸಬಾರದು ಎಂದು ಅವರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಕಾನೂನು ಪ್ರಕಾರ ನಡೆಯುತಿದೆಯೇ ಹೊರತು ಯಾರ ಅಂತಿಮ ಸೂಚನೆ ಮೇರೆಗೆ ಅಲ್ಲ ಎಂದು ಶಿವಸೇನೆಯ ಮುಖ್ಯ ವಕ್ತಾರ ಸಂಜತ್ ರಾವತ್ ಅವರು ರಾಜ್ ಠಾಕ್ರೆ ಅವರ ಹೆಸರು ಉಲ್ಲೇಖಿಸದೆ ತಿಳಿಸಿದ್ದಾರೆ.



Join Whatsapp