ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಗೊಂದಲ ಬೇಡ: ಇದು ಸಂಪೂರ್ಣ ವಿದ್ಯಾರ್ಥಿ ಕೇಂದ್ರಿತ ಎಂದ ಡಾ.ಅಶ್ವತ್ಥನಾರಾಯಣ

Prasthutha|

ಮಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ದೇಶ ಅಭಿವೃದ್ಧಿಗೆ ಪೂರಕವಾಗಿದ್ದರೂ ಇದರ ಬಗ್ಗೆ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ಕಿವಿಗೊಡುವ ಅಗತ್ಯವಿಲ್ಲ. ಸರಕಾರ ಕಲಿಕೆಯಲ್ಲಿ ಸುಧಾರಣೆ ತರುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಸಭಾಂಗಣದಲ್ಲಿ ಸೋಮವಾರದಂದು ನಡೆದ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

- Advertisement -

ಇದೇ ಸಂದರ್ಭದಲ್ಲಿ ಮೂಡಬಿದರೆಯ ಬನ್ನಡ್ಕದಲ್ಲಿ ಸ್ಥಾಪಿಸಿದ ವಿಶ್ವವಿದ್ಯಾಲಯದ ಪ್ರಥಮ ದರ್ಜೆ ಘಟಕ ಕಾಲೇಜನ್ನು ಅನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ವರ್ತಮಾನ ಭಾರತದ ಅಗತ್ಯವೇನು? ಶೈಕ್ಷಣಿಕವಾಗಿ ದೇಶ ಎದುರಿಸುತ್ತಿರುವ ಸವಾಲುಗಳೇನು? ಎಂಬುದನ್ನು ಅರಿತು ಸಮಾಜ ಹಾಗೂ ರಾಷ್ಟ್ರೀಯ ಸುಧಾರಣೆಯ ನಿಟ್ಟಿನಲ್ಲಿ ಈ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಆದರೆ ಕೆಲವರು ಇದರಲ್ಲೂ ರಾಜಕೀಯ ಮಾಡುತ್ತಿದ್ದಾರೆಂದು ಸಚಿವರು ದೂರಿದರು.

ನೂತನ ಶಿಕ್ಷಣ ನೀತಿ ವಿದ್ಯಾರ್ಥಿ ಸ್ನೇಹಿ ಹಾಗೂ ವಿದ್ಯಾರ್ಥಿ ಕೇಂದ್ರಿತವಾಗಿದೆ. ಒಂದು ಮಾತಿನಲ್ಲಿ ಹೇಳುವುದಾದರೆ ಭವಿಷ್ಯದ ಭಾರತದ ಎಲ್ಲ ಅಗತ್ಯಗಳನ್ನು ಪೂರೈಸುವ ಪರಿಣಾಮಕಾರಿ ಅಂಶಗಳೆಲ್ಲವೂ ಇದರಲ್ಲೇ ಅಡಕವಾಗಿವೆ ಎಂದು ಅವರು ನುಡಿದರು.

ಕಳೆದ ಅಗಸ್ಟ್ 15ರಂದು ನಾವು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸಿದ್ದೇವೆ. ದೇಶದ ಶತಮಾನೋತ್ಸವದ ಸಂದರ್ಭದಲ್ಲಿ ವಿಶ್ವಕ್ಕೆ ವಿಶ್ವ ಗುರುವಾಗಬೇಕಾದರೆ ಈ ನೀತಿನ್ನು ಆಮೂಲಾಗ್ರವಾಗಿ ಜಾರಿ ಮಾಡಲೇಬೇಕಿದೆ ಎಂದರು ಅವರು.

ಪಠ್ಯದಲ್ಲಿ ಪಠ್ಯೇತರ ವಿಷಯ:

ಮೊದಲು ಪಠ್ಯೇತರ ಚಟುವಟಿಕೆ ಇತ್ತು. ಆದರೆ ಈಗ ಅದು ಕೂಡ ಪಠ್ಯದ ಒಂದು ಭಾಗ. ಅಲ್ಲದೆ, ಈವರೆಗೆ ಸಮಾಜದ ಅನೇಕ ಸಮಸ್ಯೆಗಳು ಕಲಿಕೆಯ ಒಂದು ಭಾಗ ಆಗಿರಲಿಲ್ಲ. ಪುಸ್ತಕದಲ್ಲಿ ಇರುವುದನ್ನು ಮಾತ್ರ ಓದುವ ಕೆಲಸ ಆಗುತ್ತಿತ್ತು. ಅದರ ಬದಲಿಗೆ ಕುಶಲತೆ ಕಲಿಸುವ ಕೆಲಸವೂ ಈಗ ಆಗಲಿದೆ. ವಿದ್ಯಾರ್ಥಿ ತನಗೆ ಇಷ್ಟವಾಗುವ ವಿಷಯವನ್ನು ಮುಕ್ತವಾಗಿ ಕಲಿಯುವ ಅವಕಾಶ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿದೆ ಎಂದು ಸಚಿವರು ಪ್ರತಿಪಾದಿಸಿದರು.

ಈವರಗೂ ಇರುವ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಫ್ಲೆಕ್ಸಿಬಿಲಿಟಿ ಇರಲಿಲ್ಲ. ಈಗ ಬಹು ಆಯ್ಕೆಯ ಹಾಗೂ ಬಹು ಶಿಸ್ತೀಯ ಕಲಿಕೆಗೆ ಮುಕ್ತ ಅವಕಾಶ ಇದೆ. ತಂತ್ರಜ್ಞಾನ ಮೂಲಕ ಎಲ್ಲಿಂದ ಬೇಕಾದರೂ ಕಲಿಯಬಹುದು. ಮಾಹಿತಿಯನ್ನು ಜ್ಞಾನ ವಾಗಿ ರೂಪಿಸುವ ಕೆಲಸ ಆಗಬೇಕು, ಅದು ಈಗ ಆಗುತ್ತಿದೆ ಎಂದು ಅವರು ಹೇಳಿದರು.

ಹೊಸ ಶಿಕ್ಷಣ ನೀತಿ ಅನುಸಾರ ವಾರ್ಷಿಕ ಮೌಲ್ಯ ಮಾಪನದ ಬದಲಿಗೆ ನಿತ್ಯದ ಕಲಿಕೆ-ಬೋಧನೆಯ ಬಳಿಕ ಮೌಲ್ಯ ಮಾಪನವೂ ಇರುತ್ತದೆ. ಈ ಮೂಲಕ ಕಲಿಕೆಯ ಗುಣಮಟ್ಟ ವೃದ್ಧಿಯಾಗುವುದರ ಜತೆಗೆ ಪ್ರತಿ ವಿದ್ಯಾರ್ಥಿಯ ಸಾಮರ್ಥವೂ ಹೆಚ್ಚಾಗಲಿದೆ. ಇದರಿಂದ ಜಾಗತಿಕವಾಗಿ ನಮ್ಮ ವಿದ್ಯಾರ್ಥಿಗಳು ಸ್ಪರ್ಧೆ ನಡೆಸಲು ಸುಲಭ ಸಾಧ್ಯವಾಗುತ್ತದೆ ಎಂದು ಡಾ.ಅಶ್ವತ್ಥನಾರಾಯಣ ನುಡಿದರು.

ಇದೇ ವೇಳೆ ಶೈಕ್ಷಣಿಕ ಸಂಸ್ಥೆಗಳಿಗೂ ಶಕ್ತಿ ತುಂಬಲಾಗುವುದು. ಆಡಳಿತದಲ್ಲೂ ಸ್ವಾಯತ್ತತೆ ನೀಡಲಾಗುವುದು ಹಾಗೂ ಪ್ರತಿ ಸಂಸ್ಥೆಯೂ ಪದವಿ ಕೊಡುವ ಸಂಸ್ಥೆಗಳಾಗುತ್ತವೆ. ಅದರಲ್ಲಿ ಪ್ರತ್ಯೇಕ ಮಂಡಳಿ ಇರುತ್ತದೆ. ಉದಾಹರಣೆಗೆ ನಿಟ್ಟೆ ಸಂಸ್ಥೆ ಸ್ವಾಯತ್ತತೆ ಸಿಕ್ಕ ನಂತರ ಎಷ್ಟು ಎತ್ತರಕ್ಕೆ ಬೆಳೆದಿದೆ ಎಂಬ ಉದಾಹರಣೆ ನಮ್ಮ ಮುಂದೆಯೇ ಇದೆ ಎಂದು ಅವರು ವಿವರಿಸಿದರು.

ಮುಂಚೂಣಿಯಲ್ಲಿರಲಿ ದಕ್ಷಿಣ ಕನ್ನಡ:
ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಕಲಿಕೆಗೆ ಒತ್ತು ಕೊಟ್ಟ ಜಿಲ್ಲೆ ಇದು. ಹೀಗಾಗಿ ಎಲ್ಲರಿಗೂ ಮಾದರಿಯಾಗಿ ಇರಬೇಕು ಎನ್ನುವುದು ನಮ್ಮೆಲ್ಲರ ಅಪೇಕ್ಷೆ ಎಂದ ಸಚಿವರು, ಶಿಕ್ಷಣ ನೀತಿಯ ಜಾರಿ ಜಾರಿಯಲ್ಲಿ ಜಿಲ್ಲೆಯು ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ಕರೆ ನೀಡಿದರು.

ಮೊದಲು ಏನು ಬದಲಾಗಬೇಕು ಎಂಬ ಬಗ್ಗೆ ಮೊದಲಿನಿಂದಲೂ ಚರ್ಚೆ ಆಗುತ್ತಿರುತ್ತದೆ. ಶಿಕ್ಷಣದಿಂದಲೇ ಬದಲಾವಣೆ ಎಂಬುದು ಸರ್ವರೂ ಒಪ್ಪುವ ಸತ್ಯ. ಕಾಲಕಾಲಕ್ಕೆ ಬದಲಾವಣೆ ಆಗಿರಲಿಲ್ಲ. ಈಗ ಸಮಯ ಬಂದಿದೆ. ನಮ್ಮ ಸ್ಪರ್ಧೆ ಏನಿದ್ದರೂ ಅಕ್ಕಪಕ್ಕದ ರಾಜ್ಯಗಳ ಜತೆ ಅಲ್ಲ. ಬದಲಿಗೆ ವಿಶ್ವ ಮಟ್ಟದಲ್ಲಿ ಸ್ಪರ್ಧೆ ಮಾಡಬೇಕಾಗಿದೆ ಎಂದರಲ್ಲದೆ, ಶಿಕ್ಷಣ ನೀತಿ ಬದಲಾಗದ ಕಾರಣ ಭಾರತ ಭಾರೀ ನಷ್ಟ ಅನುಭವಿಸಿದೆ ಎಂದರು ಅವರು.

ಹಳ್ಳಿಯಿಂದ ದೆಹಲಿವರೆಗೆ ಮೂರುವರೆ ಲಕ್ಷಕ್ಕೂ ಹೆಚ್ಚು ಸಲಹೆಗಳನ್ನು ಪಡೆದು ಹೊಸ ನೀತಿ ಜಾರಿ ಮಾಡಿದ್ದೇವೆ. ಇದನ್ಜು ಜಾರಿ ಮಾಡಲು 15 ವರ್ಷ ಸಮಯ ಇದೆ. ಇದನ್ಜು ಜಾರಿ ಮಾಡಲು ಸಂಪುಟ ಸಭೆ ಕೂಡ ಒಪ್ಪಿಗೆ ಸಿಕ್ಕಿದೆ. ಇದನ್ನು ಹತ್ತು ವರ್ಷದಲ್ಲಿ ಈ ಎಲ್ಲ ಸಲಹೆಗಳನ್ನು ಅನುಷ್ಠಾನ ಮಾಡುವ ಉದ್ದೇಶ ಇದೆ. ಅನುಷ್ಠಾನಕ್ಕೆ ಪೂರಕವಾಗಿ ಶೈಕ್ಷಣಿಕ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಇದಕ್ಕೆ ಬೇಕಾಗುವ ಜಾಗೃತಿ ಮತ್ತು ಸಹಕಾರ ಕೊಡುವ ಕೆಲಸ ಆಗುತ್ತಿದೆ. ಹೆಲ್ತ್ ಲೈನ್ ಮಾಡಿದ್ದೇವೆ. ಯಾರಿಗೇ ಏನೇ ಪ್ರಶ್ನೆಗಳು ಇದ್ದರೂ ಅದಕ್ಕೆ ಉತ್ತರಿಸುವ ಕೆಲಸ ನಮ್ಮಿಂದ ಆಗುತ್ತಿದೆ. ಸಂಪರ್ಕದ ಕೊರತೆ ಇರಬಾರದು. ಮಾಹಿತಿಯ ಕೊರತೆ ಇರಬಾರದು ಎನ್ನುವ ಕಾರಣಕ್ಕೆ ಇವತ್ತಿನ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಸಚಿವರಿಂದ ಲೋಕಾರ್ಪಣೆಗೊಂಡಿದ್ದು ಮಂಗಳೂರು ವಿವಿಯ ಆರನೇ ಘಟಕ ಕಾಲೇಜು ಆಗಿದೆ. ಇದೇ ವೇಳೆ ಪ್ರಾಣಿಶಾಸ್ತ್ರ ವಿಭಾಗದ ಕೊಠಡಿಯನ್ನು ಉದ್ಘಾಟಿಸಲಾಯಿತು.

ಮಂಗಳೂರು ವಿವಿ ಕುಲಪತಿ ಪ್ರೊ ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ, ಶಿಕ್ಷಣ ತಜ್ಞರೂ ಆದ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎಸ್ ವಿನಯ ಹೆಗ್ಡೆ, ಶಾಸಕರಾದ ಉಮನಾಥ ಕೋಟ್ಯಾನ್, ಲಾಲಾಜಿ ಮೆಂಡನ್, ಮಾಜಿ ಶಾಸಕ ಗಣೇಶ ಕಾರ್ಣಿಕ್, ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

- Advertisement -