ಹಾವೇರಿ: ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಮೇಲೆ ರೌಡಿಶೀಟರ್ ಪ್ರಕರಣ ಇದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ಆರೋಪ ಮಾಡಿದ್ದಾರೆ. ಆದರೆ ಪಠಾಣ್ ಅವರು ತಮ್ಮ ನಾಮಪತ್ರದಲ್ಲಿ ಯಾವುದೇ ಪ್ರಕರಣಗಳಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಬೊಮ್ಮಾಯಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಇದರ ಮಧ್ಯ ಯಾಸೀರ್ ಖಾನ್ ಪಠಾಣ್ ವಿರುದ್ಧ ರೌಡಿಶೀಟರ್ ಪ್ರಕರಣದ ಬಗ್ಗೆ ಸ್ವತಃ ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಪಠಾಣ್ ಮೇಲೆ ರೌಡಿಶೀಟ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಹಲವು ಕೇಸ್ಗಳು ಇವೆ. ಆದ್ರೆ,ಅವರು ಅಫಿಡೆವಿಟ್ನಲ್ಲಿ ತಿಳಿಸಿಲ್ಲ. ಈ ಮೂಲಕ ಚುನಾವಣಾಧಿಕಾರಿಗಳು ಪಕ್ಷಪಾತ ಮಾಡಿದ್ದಾರೆ. ರಾಜ್ಯ ಹಾಗೂ ಕೇಂದ್ರ ಚುನಾವಣೆಗೆ ನಾವು ಅರ್ಜಿ ಸಲ್ಲಿಸ್ತೇವೆ. ಕೂಡಲೇ ಚುನಾವಣಾಧಿಕಾರಿಗಳು ಕಾರ್ಯ ಪ್ರವೃತ್ತರಾಗಲಿ. ಡಿಸಿ ಮೇಲೆ ದೊಡ್ಡ ಜವಾಬ್ದಾರಿ ಇದೆ. ಏನಿದೆ ಸ್ಟೇಟಸ್ ಎಂದು ಸ್ಪಷ್ಟಪಡಿಸಲಿ. ಇಲ್ಲದಿದ್ದರೆ ಅಧಿಕಾರಿಗಳು ಕಟಕಟೆಯಲ್ಲಿ ನಿಲ್ಲಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದರು.
ಇದರ ಬೆನ್ನಲ್ಲೇ ಇದೀಗ ಹಾವೇರಿ ಎಸ್ಪಿ ಅಂಶುಕುಮಾರ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಯಾಸೀರ್ ಪಠಾಣ್ ಅವರ ಮೇಲೆ ರೌಡಿಶೀಟ್ ಇದೆ ಎಂದು ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ಸಂಬಂಧ ಶಿಗ್ಗಾಂವಿ ಡಿಎಸ್ಪಿ ಹಾಗೂ ಪಿಎಸ್ಐ ಕಚೇರಿಯಿಂದ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿದ್ದು, ಯಾಸೀರ್ ಪಠಾಣ್ ಅವರ ಮೇಲೆ ಯಾವುದೇ ರೀತಿಯ ರೌಡಿಶೀಟ್ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.