ನವದೆಹಲಿ: ಕೋವಿಶಿಲ್ಡ್ ಲಸಿಕೆ ಪಡೆದು ಯುಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಖಡ್ಡಾಯ ಕ್ವಾರಂಟೈನ್ ಜಾರಿಗೊಳಿಸಿದ್ದ ಯುಕೆ ಭಾರತದ ಎಚ್ಚರಿಕೆಗೆ ಮಣಿದು ಕೊನೆಗೂ ತನ್ನ ಮಾರ್ಗಸೂಚಿಯನ್ನು ಬದಲಿಸಿದೆ. ಕೊವಿಶೀಲ್ಡ್ ಲಸಿಕೆಯೆ ಎರಡು ಡೋಸ್ ಪಡೆದ ಪ್ರಯಾಣಿಕರು ಕ್ವಾರಂಟೈನ್ ಗೆ ಒಳಗಾಗಬೇಕಿಲ್ಲ ಎಂದು ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಭಾರತ ಬ್ರಿಟನ್ ಹೈಕಮಿಷನರ್ ಅಲೆಕ್ಸ್ ಎಲೀಸ್ ಕೋವಿಶೀಲ್ಡ್ ಅಥವಾ ಯುಕೆ ಅನುಮೋದಿತ ಸಂಪೂರ್ಣ ಕೋವಿಡ್ ಲಸಿಕೆಯನ್ನು ಪಡೆದ ಭಾರತೀಯರಿಗೆ ಅಕ್ಟೋಬರ್ 11 ರಿಂದ ಯುಕೆಗೆ ಬರುವ ಭಾರತೀಯರಿಗೆ ಯಾವುದೇ ಕ್ವಾರಂಟೈನ್ ಇಲ್ಲ. ಅಲ್ಲದೇ ಈ ನಿರ್ಧಾರವನ್ನು ಜನರ ಆರೋಗ್ಯದ ದೃಷ್ಟಿಯಿಂದ ನಮ್ಮ ಸಚಿವರುಗಳ ಜೊತೆ ಮಾತುಕತೆ ನಡೆಸಿ ಬಳಿಕ ಕೈಗೊಳ್ಳಲಾಗಿದೆ ಹಾಗೂ ಕಳೆದ ತಿಂಗಳಿನಿಂದ ಉತ್ತಮ ಸಹಕಾರ ನೀಡಿದ ಭಾರತಕ್ಕೆ ಧನ್ಯವಾದಗಳು ಎಂದು ಟ್ವೀಟ್ ಮುಖಾಂತರ ತಿಳಿಸಿದ್ದಾರೆ.
ಈ ಹಿಂದೆ ಯುಕೆ ಆಸ್ಟ್ರಾಜೆನಿಕಾದ ಕೋವಿಶೀಲ್ಡ್ ಲಸಿಕೆಯನ್ನು ಪಡೆದ ಪ್ರಯಾಣಿಕರನ್ನು ಕೋವಿಡ್ ಲಸಿಕೆ ಪಡೆಯದವರು ಎಂದು ಗುರುತಿಸಲಾಗುತ್ತಿತ್ತು. ಎರಡು ಡೋಸ್ ಲಸಿಕೆ ಪಡೆದಿದ್ದರೂ ಕೂಡಾ ಈ ನಿಯಮ ಅನ್ವಯ ಆಗಲಿದೆ ಎಂದು ಯುಕೆ ಹೇಳಿತ್ತು, ಅಲ್ಲದೇ ಈ ನಿಯಮ ಭಾರೀ ವಿವಾದಕ್ಕೆ ಕಾರಣವಾಗಿತ್ತು.