ಧಾರ್ಮಿಕ ಧ್ವಜ ಹಾರಿಸಲು ಅವಕಾಶವಿಲ್ಲ: ಚಲುವರಾಯಸ್ವಾಮಿ

Prasthutha|

ಬೆಂಗಳೂರು: ಸಂವಿಧಾನ ಪ್ರಕಾರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಧ್ವಜ ಹಾರಿಸಲಷ್ಟೇ ಅವಕಾಶವಿದೆ. ಯಾವುದೇ ರಾಜಕೀಯ, ಧಾರ್ಮಿಕ ಧ್ವಜ ಹಾರಿಸಲು ಅವಕಾಶವಿಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.

- Advertisement -

ಕೆರಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹನುಮ ಧ್ವಜ ವಿವಾದದ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಚಿವರು ಮಾತನಾಡಿದರು. ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ರಾಷ್ಟ್ರೀಯ ಧ್ವಜ ಹಾರಿಸಬಹುದು. ಅದು ಹೊರತುಪಡಿಸಿ ಸರ್ಕಾರಿ ಜಾಗದಲ್ಲಿ ಬೇರೆ ಧ್ವಜವನ್ನು ಹಾರಿಸುವಂತಿಲ್ಲ. ತ್ರಿವರ್ಣ ಧ್ವಜಕ್ಕೆ ಅನುಮತಿ ಪಡೆದು ಬೇರೆ ಧ್ವಜ ಹಾರಿಸೋದು ತಪ್ಪು ಎಂದು ಹೇಳಿದ್ದಾರೆ.

ನಾಳೆ ಬೆಳಿಗ್ಗೆ ಡಿಸಿ ಕಚೇರಿ ಮುಂದೆ ಹಾರಿಸುತ್ತೇವೆ ಎನ್ನುತ್ತಾರೆ. ಆಗ ಅವಕಾಶ ಕೊಡಲು ಆಗುತ್ತದೆಯೇ? ಇದೊಂದು ಕಡೆ ಅವಕಾಶ ಕೊಟ್ಟರೆ ಎಲ್ಲಾ ಕಡೆ ಕೇಳುತ್ತಾರೆ. ಇದು ತಪ್ಪು ಎಂದರು. ಸ್ಥಳೀಯ ಯುವಕರು ಒಳ್ಳೆಯವರೇ. ಅವರನ್ನು ದಾರಿ ತಪ್ಪಿಸುತ್ತಿದ್ದಾರೆ. ಎಲ್ಲಾ ಯುವಕರ ಜೊತೆ ಮಾತನಾಡುತ್ತೇನೆ. ಬೇರೆ ಸ್ಥಳದಲ್ಲಿ ಹನುಮಾನ್ ಧ್ವಜ ಹಾರಿಸಲು ಖಾಸಗಿ ಜಾಗದಲ್ಲಿ ಅಥವಾ ದೇವಾಲಯದ ಮುಂದೆ ಹಾಕಲು ಅವಕಾಶ ಕೊಡೋಣ. ಆದರೆ ಸರ್ಕಾರಿ ಕಚೇರಿ ಮುಂದೆ ಬೇಡ. ನಾನು ಕೂಡ ರಾಮ ಭಕ್ತ, ನಮ್ಮ ಮನೆ ದೇವರು ವಿಷ್ಣು. ನಾವು ಯಾವುದೇ ಧ್ವಜದ ವಿರೋಧಿಗಳಲ್ಲ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.



Join Whatsapp