“ನಾರಿಶಕ್ತಿಯ ಮುಂದೆ ಯಾರ ಶಕ್ತಿ ಪ್ರದರ್ಶನವೂ ನಡೆಯದು”: ಡಾ.ಎಂ.ಎನ್. ರಾಜೇಂದ್ರ ಕುಮಾರ್

Prasthutha|

ಉಚ್ಚಿಲ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಇತರ ಸಹಕಾರಿಗಳ ನೇತೃತ್ವದಲ್ಲಿ 69ನೇ ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮ ಹಾಗೂ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಅಭಿನಂದನಾ ಸಮಾರಂಭ ಸೋಮವಾರ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಸಭಾಭವನದಲ್ಲಿ ಜರುಗಿತು.

- Advertisement -

ಗಣನಾಥ ಎಕ್ಕಾರು ಸಹಕಾರಿ ಕ್ಷೇತ್ರ ಮತ್ತು ಸಹಕಾರಿ ತತ್ವದ ಕುರಿತು ದಿಕ್ಸೂಚಿ ಭಾಷಣದಲ್ಲಿ, “ಸಮಾಜದಲ್ಲಿ ಪರಸ್ಪರ ಸಾಮರಸ್ಯ, ನಂಬಿಕೆ ಮತ್ತು ಸ್ವಾವಲಂಬನೆ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ಸಹಕಾರಿ ಸಂಘಟನೆಯ ಜೊತೆ ಜೊತೆಗೆ ಅಭಿವೃದ್ಧಿ ಕಾಣಲು ಸಾಧ್ಯವಿದೆ. ಹಿಂದೆ ಶಿಕ್ಷಣ ಇಲ್ಲದವರನ್ನು ಆಶಿಕ್ಷಿತರು ಎಂದು ಕರೆಯಲಾಗುತ್ತಿತ್ತು. ಆದರೆ ಇಂದು ಆಧುನಿಕ ತಂತ್ರಜ್ಞಾನದ ಜೊತೆಗೆ ಬೆಳೆಯದೆ ಇದ್ದಲ್ಲಿ ಅಂತವರನ್ನು ಆಶಿಕ್ಷಿತರು ಎಂದು ಕರೆಯಬಹುದಾಗಿದೆ. ಯಾವುದೇ ಕೌಶಲ್ಯ ನಮಗೆ ಕರಗತ ಆಗಬೇಕಿದ್ದರೆ ಮೊದಲು ಅದನ್ನು ಒಪ್ಪಿಕೊಳ್ಳಬೇಕು” ಎಂದರು.

ದೇವಿಪ್ರಸಾದ್ ಶೆಟ್ಟಿ ಬೆಳಪು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.

- Advertisement -

ಬಳಿಕ ಆಶೀರ್ವಚನ ನೀಡಿದ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, “ಸಹಕಾರ ಅನ್ನುವುದು ಸಾರ್ವಕಾಲಿಕ ಏಳಿಗೆಯ ಸೂತ್ರ. ಬ್ಯಾಂಕಿಗ್ ಕ್ಷೇತ್ರ ಮಾತ್ರವಲ್ಲ ಸಮಾಜದಲ್ಲಿ ಜಾತಿ ಮತ ಪಂಥಗಳಲ್ಲಿ ಹರಿದು ಹಂಚಿಹೋಗಿರುವ ನಾವು ಸಹಕಾರಿ ತತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅಭಿವೃದ್ಧಿ ಸಾಧ್ಯವಿದೆ. ರಾಜೇಂದ್ರ ಕುಮಾರ್ ಅವರ ಸಾಧನೆಯಿಂದ ಸಹಕಾರಿ ಕ್ಷೇತ್ರ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಮುಂದೆಯೂ ಅವರ ಮಾರ್ಗದರ್ಶನದಲ್ಲಿ ಸಹಕಾರಿ ರಂಗ ಇನ್ನಷ್ಟು ಬೆಳೆಯಲಿ” ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಎಂ.ಎನ್. ರಾಜೇಂದ್ರ ಕುಮಾರ್ ದಂಪತಿಯನ್ನು ಬೆಳ್ಳಿಯ ಶಂಖ ಹಾಗೂ ಅಪರೂಪದ ಭಾವಚಿತ್ರ ಕೊಟ್ಟು ಶಾಲು ಹೊದೆಸಿ ಸನ್ಮಾನಿಸಲಾಯಿತು.

ಜನರನ್ನುದ್ದೇಶಿಸಿ ಮಾತಾಡಿದ ಅವರು, “ನಾರಿ ಶಕ್ತಿಯ ಮುಂದೆ ಯಾರ ಶಕ್ತಿ ಪ್ರದರ್ಶನವೂ ನಡೆಯುವುದಿಲ್ಲ. ಯಾಕೆಂದರೆ ಇಲ್ಲಿ ಸೇರಿರುವ 90%ದಷ್ಟು ಮಹಿಳೆಯರು ನಮ್ಮ ನವೋದಯ ಸ್ವಸಹಾಯ ಸಂಘದ ಸದಸ್ಯರು ಅಂತ ಹೇಳಲು ನನಗೆ ಹೆಮ್ಮೆ ಅನಿಸುತ್ತದೆ. ನಾವು ಶಕ್ತಿ ತೋರಿಸಲು ಇಲ್ಲಿ ಬಂದಿಲ್ಲ ನಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇಲ್ಲಿಗೆ ಬಂದಿದ್ದೇವೆ. ಎಲ್ಲರೂ ಸಹಕಾರ ಸಂಘಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂಬ ದೃಷ್ಟಿಯಿಂದ ವಾರಗಳ ಕಾಲ ಸಹಕಾರ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಏಳು ದಿನಗಳ ಕಾಲ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಪ್ತಾಹ ಕಾರ್ಯಕ್ರಮ ನಡೆಯಲಿದ್ದು ಇದರ ಸದುಪಯೋಗವನ್ನು ಸಹಕಾರಿ ಸಂಘಗಳು ಮತ್ತು ಸದಸ್ಯರು ಪಡೆದುಕೊಳ್ಳಬೇಕು. ಎಲ್ಲರನ್ನೂ ಸಮಾನವಾಗಿ ಕಾಣಬೇಕೆಂಬ ಉದ್ದೇಶದಿಂದ, ಜಾತಿ ಮತ ಧರ್ಮದ ಬೇಧ ಹೊಂದಬಾರದು ಎಂಬ ಕಾರಣಕ್ಕೆ ಸಂಘದ ಮಹಿಳೆಯರಿಗೆ ಒಂದೇ ಬಣ್ಣದ ಸೀರೆಯನ್ನು ನೀಡಲಾಗಿದೆ” ಎಂದು ಆಶಯ ವ್ಯಕ್ತಪಡಿಸಿದರು.

ಬಳಿಕ ಮಾತಾಡಿದ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಅವರು “ಕಾಂತಾರ ಚಿತ್ರ ಯಾವ ರೀತಿ ದೇಶ ವಿದೇಶಗಳಲ್ಲಿ ತುಳುನಾಡಿನ ದೈವಾರಾಧನೆ ಬಗ್ಗೆ ವೈಬ್ರೇಷನ್ ಸೃಷ್ಟಿ ಮಾಡಿದೆಯೋ ಹಾಗೇ ಸಹಕಾರಿ ಕ್ಷೇತ್ರದಲ್ಲಿ ವೈಬ್ರೇಷನ್ ಸೃಷ್ಟಿಸಿದವರು ಎಂ.ಎನ್. ರಾಜೇಂದ್ರ ಕುಮಾರ್ ಅವರು. ಕರ್ನಾಟಕ ರಾಜ್ಯದಲ್ಲಿ ಅತ್ಯುತ್ತಮ ಸಹಕಾರಿ ಎಂಬ ಬಿರುದಿಗೆ ಪಾತ್ರರಾಗಿರುವ ಜೊತೆಗೆ ತಮ್ಮ ಜೊತೆ ಇರುವವರನ್ನು ಬೆಳೆಸುವ, ಒಗ್ಗೂಡಿಸುವ ಧುರೀಣರಾಗಿದ್ದಾರೆ. ಅವರು ಚುನಾವಣೆಗೆ ನಿಲ್ಲುವುದಾಗಿ ಹೇಳಿದ ಕೂಡಲೇ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ವೈಬ್ರೇಷನ್ ಪ್ರಾರಂಭ ಆಯ್ತು. ಇಂತಹ ರಾಜೇಂದ್ರ ಕುಮಾರ್ ಅವರು ಹಮ್ಮಿಕೊಂಡಿರುವ ಸಹಕಾರಿ ಸಪ್ತಾಹದ ಆಶಯ ಈಡೇರಲಿ” ಎಂದರು.

ವೇದಿಕೆಯಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ. ಬೆಂಗಳೂರು ಇದರ ಅಧ್ಯಕ್ಷರಾದ ಡಾ. ಎಂ. ಎನ್. ರಾಜೇಂದ್ರ ಕುಮಾರ್, ಧರ್ಮಪತ್ನಿ ಅರುಣಾ ರಾಜೇಂದ್ರ ಕುಮಾರ್, ಜಿಲ್ಲಾ ಸಹಕಾರಿ ಯೂನಿಯನ್ ನಿ. ಉಡುಪಿ ಇದರ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಕಾಪು ಶಾಸಕ ಲಾಲಾಜಿ ಎಸ್. ಮೆಂಡನ್, ಬೈಂದೂರು ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಇದರ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು, ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ ಪಾಲ್ ಎ. ಸುವರ್ಣ, ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಇದರ ನಿರ್ದೇಶಕ ಮಂಜುನಾಥ್ ಎಸ್.ಕೆ., ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಕೆ.ಎಂ.ಎಫ್. ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ಸಹಕಾರ ಸಂಘಗಳ ಜಂಟಿ ನಿಬಂಧಕ ಡಾ. ಉಮೇಶ್ ಜಿ., ಲಕ್ಷ್ಮೀನಾರಾಯಣ ಜಿ.ಎನ್., ಗಣೇಶ್ ಮಯ್ಯ, ಎಸ್ ಸಿಡಿಸಿಸಿ ಬ್ಯಾಂಕ್ ಡಿಜಿಎಂ ಗೋಪಿನಾಥ್ ಭಟ್, ಜಗದೀಶ್ ಅಂಚನ್ ಸೂಟರ್ ಪೇಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ 2000ಕ್ಕೂ ದ್ವಿಚಕ್ರ ವಾಹನಗಳು, 500 ಕಾರ್ ಗಳ ಬೃಹತ್ ರಾಲಿ ಮೂಲಕ ಅತಿಥಿಗಳನ್ನು ಅದ್ಧೂರಿ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು.



Join Whatsapp