ಯಾರು ಕೂಡ 4-6 ತಿಂಗಳಲ್ಲಿ ಮುಖ್ಯಮಂತ್ರಿಗಳನ್ನು ಬದಲಿಸುವುದಿಲ್ಲ: ಸಚಿವ ಡಾ.ಕೆ.ಸುಧಾಕರ್

Prasthutha|

ಬೆಂಗಳೂರು; ರಾಜ್ಯದ ಆರು ಜಿಲ್ಲೆಗಳಲ್ಲಿ ಹೆಚ್ಚು ಅಪೌಷ್ಟಿಕತೆ ಹೆಚ್ಚಿದೆ. ಈ ಸಮಸ್ಯೆಯನ್ನು ನಿವಾರಿಸಿ ಮುಂದಿನ ವರ್ಷ ನೀತಿ ಆಯೋಗದ ಆರೋಗ್ಯ ಸೂಚ್ಯಂಕದಲ್ಲಿ ರಾಜ್ಯವನ್ನು ಮೊದಲ ಮೂರರ ಸ್ಥಾನದಲ್ಲಿ ಬರುವಂತೆ ಪ್ರಯತ್ನಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ 6 ಜಿಲ್ಲೆಗಳಲ್ಲಿ ಅಪೌಷ್ಟಿಕತೆ ಹೆಚ್ಚಿದೆ. ಅಲ್ಲಿಗೆ ವಿಶೇಷ ಒತ್ತು ನೀಡಿ ಅಪೌಷ್ಟಿಕತೆಗೆ ನಿವಾರಣೆಗೆ ಕ್ರಮ ವಹಿಸಲಾಗುವುದು. ಮುಂದಿನ ವರ್ಷ ನೀತಿ ಆಯೋಗದ ಆರೋಗ್ಯ ಸೂಚ್ಯಂಕದಲ್ಲಿ ಟಾಪ್ 3 ರಲ್ಲಿ ಬರುವಂತೆ ಕ್ರಮ ವಹಿಸಲಾಗುವುದು ಎಂದರು.

ಕೋವಿಡ್ ಪ್ರಕರಣಗಳ ಪ್ರಮಾಣ ಬೆಂಗಳೂರಿನಲ್ಲಿ ಇಳಿಕೆಯಾಗುತ್ತಿದೆ. ಬೇರೆ ಜಿಲ್ಲೆಗಳಲ್ಲಿ ನಿಧಾನವಾಗಿ ಏರುತ್ತಿದೆ. ಆದರೆ ಆಸ್ಪತ್ರೆ ದಾಖಲಾತಿ 1-2% ಮಾತ್ರ ಇರುವುದರಿಂದ ಆರೋಗ್ಯ ವ್ಯವಸ್ಥೆಯ ಮೇಲೆ ಹೆಚ್ಚು ಒತ್ತಡ ಇಲ್ಲ. ಒಮಿಕ್ರಾನ್ ವೈರಾಣು ಇದ್ದರೂ ರೋಗ ತೀವ್ರತೆ ಇಲ್ಲ. ಕಳೆದೆರಡು ಅಲೆಗಳಿಗೆ ಹೋಲಿಸಿದರೆ ಈ ಅಲೆಯಲ್ಲಿ ಸಾವಿನ ಪ್ರಮಾಣ ಬಹಳ ಕಡಿಮೆ ಇದೆ. (0.004%) ಹಾಗೆಯೇ ಹೊಸ ಪ್ರಕರಣಗಳಿಗಿಂತ ಗುಣಮುಖರಾಗುವವರ ಪ್ರಮಾಣ ಅಧಿಕವಾಗಿದೆ. ಪ್ರಕರಣ ಕಡಿಮೆಯಾಗುತ್ತಿರುವಾಗ ಅತಿ ಕಠಿಣ ನಿಯಮಗಳ ಅಗತ್ಯವಿಲ್ಲ ಎಂದರು.

- Advertisement -

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಹೊಸ ಜಿಲ್ಲಾಸ್ಪತ್ರೆ ನಿರ್ಮಾಣವಾಗಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಈ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು. ಸ್ಥಳದ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು. ಹಾಗೆಯೇ ಜಿಲ್ಲಾಡಳಿತ ಕಚೇರಿ ಎಲ್ಲಿರಬೇಕೆಂದು ಜನಪ್ರತಿನಿಧಿಗಳ ಸಹಮತದೊಂದಿಗೆ ತೀರ್ಮಾನಿಸಲಾಗುವುದು. ಈ ಭಾಗದಲ್ಲಿ ಯುವಜನರಿಗೆ ಉದ್ಯೋಗ ನೀಡಲು ಕೈಗಾರಿಕೆ ಆರಂಭಕ್ಕೆ ಒತ್ತು ನೀಡಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಬದಲಾವಣೆಯಿಂದ ಸಹಜವಾಗಿ ಕಾರ್ಯಕರ್ತರಿಗೆ, ಬೆಂಬಲಿಗರಿಗೆ ಬೇಸರವಾಗಿರಬಹುದು. ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಇಲ್ಲದಿದ್ದರೂ, ಚಿಕ್ಕಬಳ್ಳಾಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ಹಿರಿಯರಾದ ಎಂಟಿಬಿ ನಾಗರಾಜ್ ಅವರ ಸಹಕಾರ ಪಡೆದು ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯ ನಡೆಯಲಿದೆ. ಹಾಗೆಯೇ ಎಲ್ಲ ಕ್ಷೇತ್ರಗಳಿಗೆ ಭೇಟಿ ನೀಡಿ ಬಿಜೆಪಿ ಬಲಪಡಿಸಲಾಗುವುದು ಎಂದರು.

ಯಾರೇ ಶಾಸಕರು ಮತ್ತೊಂದು ಪಕ್ಷದವರ ಜೊತೆ ಎದುರಿಗೆ ಸಿಕ್ಕಾಗ ಮಾತನಾಡಿದರೆ ಪಕ್ಷ ಸೇರುತ್ತಾರೆ ಎಂದು ಹೇಳುವುದಲ್ಲ. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಕಾಂಗ್ರೆಸ್ ನವರು ಚಾಲ್ತಿಯಲ್ಲಿರಲು ಹೇಳಿಕೆ ನೀಡುತ್ತಿದ್ದಾರೆ. ಯಾರೂ ಕೂಡ ನಾಲ್ಕು, ಆರು ತಿಂಗಳಲ್ಲಿ ಮುಖ್ಯಮಂತ್ರಿಗಳನ್ನು ಬದಲಿಸುವುದಿಲ್ಲ. ಅವೆಲ್ಲ ಸಂಪೂರ್ಣ ಗಾಳಿ ಸುದ್ದಿ ಎಂದು ಸ್ಪಷ್ಟಪಡಿಸಿದರು.



Join Whatsapp