ಧೈರ್ಯ ತುಂಬಿದ್ದು ಧೋನಿ ಮಾತ್ರ: ವಿರಾಟ್ ಕೊಹ್ಲಿ

Prasthutha|

ದುಬೈ: ಯುಎಇಯಲ್ಲಿ ನಡೆಯುತ್ತಿರುವ ಏಷ್ಯಾ ಕಪ್‌ ಟೂರ್ನಿಯಲ್ಲಿ ಸತತ ಎರಡು ಅರ್ಧಶತಕಗಳನ್ನು ಬಾರಿಸುವ ಮೂಲಕ ಮಾಜಿ ನಾಯಕ ವಿರಾಟ್‌ ಕೊಹ್ಲಿ ಫಾರ್ಮ್‌ಗೆ ಮರಳುವ ಸೂಚನೆ ನೀಡಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ  ಅರ್ಧಶತಕ (32) ದಾಖಲಿಸಿದ ಬ್ಯಾಟ್ಸ್​ಮನ್ ಎಂಬ ದಾಖಲೆ ಕೊಹ್ಲಿ ಪಾಲಾಗಿದೆ.  ಈ ಹಾದಿಯಲ್ಲಿ ಕೊಹ್ಲಿ, ಟೀಮ್‌ ಇಂಡಿಯಾದ ನಾಯಕ ರೋಹಿತ್ ಶರ್ಮಾರನ್ನು (31 ಅರ್ಧಶತಕ) ಹಿಂದಿಕ್ಕಿದ್ದಾರೆ. ಮುಂಬರುವ ಟಿ20 ವಿಶ್ವಕಪ್‌ ಟೂರ್ನಿಗೆ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಕೊಹ್ಲಿ ಪಾಲಿಗೆ ಏಷ್ಯಾ ಕಪ್‌ ಟೂರ್ನಿ ಅತಿ ಮಹತ್ವದ್ದಾಗಿದೆ.

- Advertisement -

ಭಾನುವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿರಾಟ್‌ ಕೊಹ್ಲಿ, ಸಂಕಷ್ಟದ ಸಮಯದಲ್ಲಿ ತಮ್ಮ ಬೆಂಬಲಕ್ಕೆ ನಿಂತ ಮಾಜಿ ಸಹ ಆಟಗಾರ, ನಾಯಕ ಧೋನಿಯ ಸಹಾಯವನ್ನು ನೆನೆದಿದ್ದಾರೆ.

ʻಒಂದು ವಿಷಯವನ್ನು ಹೇಳ ಬಯಸುತ್ತೇನೆ. ನಾನು ಟೆಸ್ಟ್​ ನಾಯಕತ್ವ ತೊರೆದಾಗ ಈ ಹಿಂದೆ ನನ್ನೊಂದಿಗೆ ಆಡಿದ ಒಬ್ಬ ವ್ಯಕ್ತಿಯಿಂದ ಮಾತ್ರ ನನಗೆ ಸಂದೇಶ ಬಂದಿತ್ತು. ಅದು ಎಂ. ಎಸ್. ಧೋನಿ. ಅನೇಕ ಮಂದಿಯಲ್ಲಿ ನನ್ನ ಮೊಬೈಲ್ ಸಂಖ್ಯೆ ಇದೆ. ಟಿ.ವಿಯಲ್ಲಿ ಅನೇಕ ಮಂದಿ ಸಲಹೆ ನೀಡುತ್ತಿರುತ್ತಾರೆ. ಜನರು ಕೂಡ ನನ್ನ ಕುರಿತು ಬಹಳಷ್ಟು ಮಾತನಾಡುತ್ತಿರುತ್ತಾರೆ. ಆದರೆ ಧೋನಿಯನ್ನು ಬಿಟ್ಟು ನನ್ನ ನಂಬರ್ ಇರುವ ಬೇರೆ ಯಾವುದೇ ವ್ಯಕ್ತಿ ನನಗೆ ಸಂದೇಶ ಕಳುಹಿಸಿರಲಿಲ್ಲʼ ಎಂದು ಕೊಹ್ಲಿ ಹೇಳಿದ್ದಾರೆ.

- Advertisement -

ನೀವು ಇನ್ನೊಬ್ಬರ ಕುರಿತು ನಿಜವಾದ ಗೌರವ ಹೊಂದಿದ್ದರೆ, ಈ ರೀತಿಯ ಸಂಬಂಧಗಳು ಮುಂದುವರಿಯುತ್ತದೆ. ಇಬ್ಬರಲ್ಲೂ ಭದ್ರತೆಯ ಭಾವನೆ ಮೂಡುತ್ತದೆ. ಅವರು (ಧೋನಿ), ನನ್ನಿಂದ ಏನನ್ನೂ ಬಯಸುವುದಿಲ್ಲ. ನನ್ನಿಂದ ಅವರಿಗೆ ಆಗಬೇಕಾದದ್ದು ಏನೂ ಇಲ್ಲ.  ನಾನು ಕೂಡ ಅವರಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ಅಭದ್ರತೆಯೂ ಕಾಡುವುದಿಲ್ಲ.

 ʻನಾನು ಯಾರಿಗಾದರು ಆಟದ ಬಗ್ಗೆ ಹೇಳಬೇಕಾದರೆ ಪ್ರತ್ಯೇಕವಾಗಿ ಅವರ ಬಳಿ ಹೋಗುತ್ತೇನೆ. ಯಾರಿಂದಾದರೂ ಸಲಹೆ ಪಡೆಯಬೇಕಾದರೂ ಹಾಗೆಯೇ ಮಾಡುತ್ತೇನೆ. ಆದರೆ, ಕೆಲವರು ಟಿ.ವಿ. ಮುಂದೆ ಬಂದು ಸಲಹೆಗಳನ್ನು ನೀಡಲು ಬಯಸಿದ್ದರೆ ಅದಕ್ಕೆ ನಾನು ಯಾವುದೇ ಮೌಲ್ಯವನ್ನು ಕೊಡುವುದಿಲ್ಲ. ಪರಸ್ಪರ ಚರ್ಚಿಸಬೇಕು. ಅದನ್ನು ಪ್ರಾಮಾಣಿಕವಾಗಿ ಪಡೆದುಕೊಳ್ಳುತ್ತೇನೆ. ನಾನು ತುಂಬಾ ಪ್ರಾಮಾಣಿಕವಾಗಿ ಜೀವನ ನಡೆಸುವ ವ್ಯಕ್ತಿ. ಇಷ್ಟು ದಿನ ಕ್ರಿಕೆಟ್​​ ಅನ್ನು ಪ್ರಾಮಾಣಿಕವಾಗಿಯೇ ಆಡಿದ್ದೇನೆʼ, ಎಂದು ಕೊಹ್ಲಿ ಹೇಳಿದ್ದಾರೆ.

Join Whatsapp