ಮಂಗಳೂರು: ಕೇಂದ್ರ ಸರಕಾರವು ಕೇರಳ ರಾಜ್ಯದ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ನಿರಾಕರಿಸಿರುವುದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಜಿಲ್ಲಾಧಿಕಾರಿಗಳ ಮೂಲಕ ಮತ್ತೆ ಆ ಸ್ತಬ್ಧ ಚಿತ್ರಕ್ಕೆ ಅವಕಾಶ ನೀಡುವಂತೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಎಲ್ಲ ಜಾತಿ ಜನಾಂಗಗಳವರಿಂದ ಆರಾಧಿಸಲ್ಪಡುವ ಮತ್ತು ಗೌರವಿಸಲ್ಪಡುವ ನಾರಾಯಣ ಗುರುಗಳು. ಗಾಂಧೀಜಿ, ರವೀಂದ್ರನಾಥ ಠಾಗೋರ್, ವಿವೇಕಾನಂದ ಮೊದಲಾದವರಿಂದ ಉನ್ನತ ಆದರ್ಶ ವ್ಯಕ್ತಿಯಾಗಿ ಬೆಳಗಿದವರು ನಾರಾಯಣ ಗುರುಗಳು. ಕೇರಳವು ದೇಶದಲ್ಲೇ ಸಾಕ್ಷರತೆಯಲ್ಲಿ ಮುಂದಿರುವುದಕ್ಕೆ ನಾರಾಯಣ ಗುರುಗಳ ಶಿಕ್ಷಣ ಕ್ರಾಂತಿಯೇ ಕಾರಣ. ಹಿಂದೆ ಸಂಸತ್ತಿನಲ್ಲಿ ನಾರಾಯಣ ಗುರುಗಳ ಭಾವಚಿತ್ರ ಇಡಲು ಶಿವಗಿರಿ ಮಾಡಿದ ಮನವಿಯನ್ನು ಸಹ ಕೇಂದ್ರ ನಿರಾಕರಿಸಿದೆ. ಇಂಥ ಮಹಾನ್ ಗುರುಗಳಿಗೆ ಕೇಂದ್ರವು ಅವಮಾನಿಸಿರುವುದು ತುಂಬ ನೋವು ತಂದಿದೆ ಎಂದು ಹರೀಶ್ ಕುಮಾರ್ ಹೇಳಿದರು.
ಜಾತೀಯತೆ ಹೋಗಲಾಡಿಸಿ ಮಾನವರೆಲ್ಲರೂ ಒಂದೇ ಜಾತಿ ಎಂದು, ಯಾವುದೇ ಹಿಂಸಾಚಾರ ಇಲ್ಲದಂತೆ ಕೇರಳದಲ್ಲಿ ಕ್ರಾಂತಿ ಮಾಡಿದವರು ನಾರಾಯಣ ಗುರುಗಳು. ಈಗ ಕೇಂದ್ರವು ಜನರಲ್ಲಿ ಕ್ಷಮಾಪಣೆ ಕೇಳಬೇಕು ಎಂದು ಅವರು ಹೇಳಿದರು.
ಮಾಜಿ ಶಾಸಕ ಲೋಬೋ ಮಾತನಾಡಿ, ನಾರಾಯಣ ಗುರುಗಳಿಗೆ ಸ್ತಬ್ಧ ಚಿತ್ರ ಬೇಕಿಲ್ಲ. ಅವರು ಅದಕ್ಕಿಂತ ಎತ್ತರದ ವ್ಯಕ್ತಿತ್ವದವರು. ಆದ್ದರಿಂದ ಅವರ ಟ್ಯಾಬ್ಲೋ ನಿರಾಕರಣೆ ಮಾಡಿರುವುದು ಖಂಡನೀಯ. ಅದೇ ರೀತಿ ಪಶ್ಚಿಮ ಬಂಗಾಳದ ಸುಭಾಷ್ ಚಂದ್ರ ಬೋಸ್ ಅವರ ಮೂರ್ತಿ ಇದ್ದ ಸ್ತಬ್ಧ ಚಿತ್ರವನ್ನು ನಿರಾಕರಿಸಿದ್ದಾರೆ. ಇದು ಕೂಡ ಖಂಡನೀಯ ಎಂದು ಜೆ. ಆರ್. ಲೋಬೋ ಹೇಳಿದರು.
ಮೇಲ್ಮನೆ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ ಆರು ತಿಂಗಳ ಕಾಲ ಶಿರಾಡಿ ಘಾಟ್ ಬಂದ್ ಮಾಡುವ ಅಗತ್ಯವಿಲ್ಲ. ಶ್ರವಣಬೆಳಗೊಳದ 100 ಕಿಮೀ ರಸ್ತೆ ಮೂರು ತಿಂಗಳಲ್ಲಿ ಮುಗಿಸಿದ ಉದಾಹರಣೆ ಇದೆ. ಶಿರಾಡಿ ಘಾಟ್ನ 10 ಕಿಮೀಗೆ 6 ತಿಂಗಳು ಬಂದ್ ಏಕೆ? ಹಾಗೆ ಬಂದ್ ಮಾಡಬಾರದು ಎಂದು ಅವರು ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಟಿ. ಕೆ. ಸುಧೀರ್, ನವೀನ್ ಡಿಸೋಜಾ, ಪ್ರಕಾಶ್ ಸಾಲಿಯಾನ್, ಆರೀಫ್, ಶಾಂತಲಾ ಗಟ್ಟಿ, ಶೋಭಾ, ವಿಶ್ವಾಸ್ ದಾಸ್, ಪಾಲ್ ಮೊದಲಾದವರು ಉಪಸ್ಥಿತರಿದ್ದರು.