ಬೆಂಗಳೂರು: ಕರ್ನಾಟಕದಲ್ಲಿ ನಕ್ಸಲಿಸಂ ‘ಹೆಚ್ಚು ಕಡಿಮೆ’ ಅಂತ್ಯಗೊಂಡಿದೆ. ಮುಖ್ಯಮಂತ್ರಿ ಕಚೇರಿಯಲ್ಲಿ ಮಾವೋವಾದಿಗಳು ಶರಣಾಗುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ಗುರುವಾರ ಹೇಳಿದ್ದಾರೆ.
ರಾಜ್ಯದಲ್ಲಿ ಆರು ಮಂದಿ ನಕ್ಸಲರಿಗೆ ಸರ್ಕಾರ ಶರಣಾಗತಿ ಪ್ಯಾಕೇಜ್ ನೀಡಿದೆ. ನಕ್ಸಲರನ್ನು ಕ್ಷಮಿಸಿ ಅವರನ್ನು ನಗರ ನಕ್ಸಲರನ್ನಾಗಿಸುತ್ತಿದೆ ಎಂಬ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ವಿ ಸುನೀಲ್ ಕುಮಾರ್ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಯಾರೊಬ್ಬರೂ ನಕ್ಸಲ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದು ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸಬೇಕು. ನಕ್ಸಲರು ಮುಖ್ಯಮಂತ್ರಿಗಳ ಮುಂದೆ ಶರಣಾದಾಗ ಅದು ರಾಜ್ಯದ ಎಲ್ಲರಿಗೂ ಗೊತ್ತಾಗುತ್ತದೆ. ನಕ್ಸಲರ ಪರಿವರ್ತನೆಗೆ ಸರ್ಕಾರ ಅವಕಾಶ ಕಲ್ಪಿಸಿದೆ. ಅದರಲ್ಲಿ ತಪ್ಪೇನು? ಎಂದು ಪ್ರಶ್ನಿಸಿದರು.
ಮಾವೋವಾದಿಗಳ ಚಟುವಟಿಕೆ ಹೆಚ್ಚಿರುವ ಕಾರ್ಕಳ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸುನೀಲ್ ಕುಮಾರ್, ‘ಕಾಡುಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಮಾವೋವಾದಿಗಳನ್ನು ನಗರ ನಕ್ಸಲರನ್ನಾಗಿಸುವ ಪ್ರಯತ್ನ ಇದಾಗಿದೆ. ಹಲವು ವರ್ಷಗಳಿಂದ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ನಕ್ಸಲರ ವಿರುದ್ಧ ಹಗಲಿರುಳು ಕಾರ್ಯಾಚರಣೆ ನಡೆಸಿದ್ದು, ಈ ಬೆಳವಣಿಗೆ ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಪರಮೇಶ್ವರ, ‘ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರ ಕ್ಷೇತ್ರದಲ್ಲಿಯೇ ಗಮನಾರ್ಹ ನಕ್ಸಲ್ ಚಟುವಟಿಕೆ ಇದೆ. ಹಾಗಿದ್ದರೆ, ಕಾರ್ಕಳದಲ್ಲಿ ಎಎನ್ ಎಫ್ (ನಕ್ಸಲ್ ನಿಗ್ರಹ ಪಡೆ) ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.