ನವದೆಹಲಿ: ಉತ್ತರಪ್ರದೇಶದ ಲಖಿಂಪುರ ಖೇರಿ ದುಷ್ಕೃತ್ಯದ ಐದು ದಿನಗಳ ನಂತರ ಪ್ರಧಾನ ಆರೋಪಿಯನ್ನೇನೋ ಕೊನೆಗೂ ಬಂಧಿಸಲಾಗಿದೆ. ಆದರೆ ಈ ಕ್ರೌರ್ಯದಲ್ಲಿ ತಮ್ಮ ಹೇಳಿಕೆಯ ಮೂಲಕ ಕೊಡುಗೆ ನೀಡಿದ ಆತನ ತಂದೆ, ಅಜಯ್ ಮಿಶ್ರ ಇನ್ನೂ ಕೇಂದ್ರ ಮಂತ್ರಿಯಾಗೇ ಇದ್ದಾರೆ. ಗೃಹ ಇಲಾಖೆಯಲ್ಲಿ ರಾಜ್ಯಮಂತ್ರಿಯಾಗಿರುವ ಅವರು ಆ ಹುದ್ದೆಯಲ್ಲಿ ಮುಂದುವರೆಯುವವರೆಗೆ ಈ ಘಟನೆಯಲ್ಲಿ ನ್ಯಾಯ ಸಿಗದು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಪುನರುಚ್ಛರಿಸಿದ್ದಾರೆ.
ಅಕ್ಟೋಬರ್ 11ರಂದು ಸಿಪಿಐ(ಎಂ)ನ ಪೊಲಿಟ್ ಬ್ಯುರೊ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಜಯ್ ಮಿಶ್ರರವರನ್ನು ತಕ್ಷಣವೇ ಕೇಂದ್ರ ಸಂಪುಟದಿಂದ ವಜಾ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಲಸಿಕೀಕರಣ ಈಗಿನ ಗತಿಯಲ್ಲೇ ಮುಂದುವರೆದರೆ ಸರಕಾರ ಸುಪ್ರಿಂ ಕೋರ್ಟಿಗೆ ಸಲ್ಲಿಸಿದ ಅಫಿಡವಿತ್ ನಲ್ಲಿ ಮತ್ತು ದೇಶಕ್ಕೆ ಕೊಟ್ಟ ಆಶ್ವಾಸನೆಯನ್ನು ಈಡೇರಿಸುವುದು ಅಸಾಧ್ಯ, ಪ್ರಧಾನ ಮಂತ್ರಿಗಳ ಜನ್ನದಿನಾಚರಣೆಯೆಂದು ಸಾಧ್ಯವಾಗುವ ತೀವ್ರ ಲಸಿಕೀಕರಣವನ್ನು ಬೇರೆ ದಿನಗಳಲ್ಲಿಯೂ ಮಾಡಲು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ ಯೆಚೂರಿ ತಕ್ಷಣವೇ ಲಸಿಕೀಕರಣವನ್ನು ತೀವ್ರಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ದೇಶದ ಪ್ರತಿಷ್ಠಿತ ಸಂಸ್ಥೆ ಏರ್ ಇಂಡಿಯಾವನ್ನು ಟಾಟಾಗಳಿಗೆ ಮಾರಿರುವುದಲ್ಲ, ವಾಸ್ತವವಾಗಿ ಅದನ್ನು ಪುಕ್ಕಟೆ ಉಡುಗೊರೆಯಾಗಿ ಕೊಡಲಾಗಿದೆ. ಅಪಾರ ಸಾಲ ಮಾಡಿ ನಿರ್ಮಿಸಲಾದ ಅದರ ಅಗಾಧ ಸೊತ್ತುಗಳು ಕೇವಲ 2700 ಕೋಟಿ ರೂ.ಗೆ ಟಾಟಾಗಳ ಒಡೆತನಕ್ಕೆ ಹೋಗುತ್ತಿವೆ, ಈ ಸೊತ್ತುಗಳನ್ನು ನಿರ್ಮಿಸಲು ಮಾಡಿದ ಸಾಲದ ಬಹುಭಾಗ, ರೂ.46,262 ಕೋಟಿ ಹೊರೆಯನ್ನು ಸರಕಾರವೇ ಇಟ್ಟುಕೊಂಡಿದೆ, ಅಂದರೆ ಜನಗಳ ಹಣದಿಂದಲೇ ತೀರಿಸಬೇಕಾಗಿದೆ ಎಂಬ ಸಂಗತಿಯತ್ತ ಯೆಚೂರಿ ಗಮನ ಸೆಳೆದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಅಮಾಯಕ ಜನಗಳ ಹತ್ಯೆಗಳಿಂದಾಗಿ ಆತಂಕಕಾರೀ ಪರಿಸ್ಥಿತಿ ಉಂಟಾಗಿದೆ, 2019ರಲ್ಲಿ ಸರಕಾರ ಕೈಗೊಂಡ ತೀವ್ರ ಕ್ರಮಗಳಿಂದಾಗಿ ಭಾರತದೊಂದಿಗೆ ಆ ಪ್ರದೇಶದ ಸಮಗ್ರೀಕರಣ ಪೂರ್ಣಗೊಳ್ಳುತ್ತದೆ, ಎಂಬ ಸರಕಾರದ ಹೆಗ್ಗಳಿಕೆ ಹುಸಿಯಾಗಿದೆ, ತದ್ವಿರುದ್ಧವಾಗಿ ಭಯದ ವಾತಾವರಣ ಮತ್ತು ಜನಗಳಲ್ಲಿ ಪರಕೀಯ ಭಾವ ಇನ್ನಷ್ಟು ಹೆಚ್ಚಿದೆ ಎಂದು ಯೆಚುರಿ ಹೇಳಿದರು.
ಸಿಪಿಐ(ಎಂ)ನ 23ನೇ ಮಹಾಧಿವೇಶನ
ಕಣ್ಣೂರಿನಲ್ಲಿ ಏಪ್ರಿಲ್ 2022ರಲ್ಲಿ ಸಿಪಿಐ(ಎಂ)ನ 23ನೇ ಮಹಾಧಿವೇಶನಕ್ಕೆ ಸಿದ್ಧತೆಯಾಗಿ ರಾಜ್ಯ ಸಮ್ಮೇಳನಗಳು ಆರಂಭವಾಗಿವೆ. ದಿಲ್ಲಿ, ಹಿಮಾಚಲ ಪ್ರದೇಶ, ಹರ್ಯಾಣ ಮತ್ತು ಉತ್ತರಪ್ರದೇಶದ ರಾಜ್ಯ ಘಟಕಗಳು ತಮ್ಮ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿವೆ ಮತ್ತು ಅಖಿಲ ಭಾರತ ಮಹಾಧಿವೇಶನಕ್ಕೆ ಪ್ರತಿನಿಧಿಗಳನ್ನು ಆರಿಸಿವೆ. ಇತರೆಲ್ಲ ರಾಜ್ಯ ಸಮ್ಮೇಳನಗಳ ದಿನಾಂಕಗಳನ್ನು ನಿರ್ಧರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.