ಪ್ರಸಕ್ತ ವರ್ಷ ಹಜ್ ಯಾತ್ರೆಗೆ ಮಂಗಳೂರಿನಿಂದ ಯಾವುದೇ ವಿಮಾನಗಳಿಲ್ಲ: ಹಜ್ ಸಮಿತಿ ಸ್ಪಷ್ಟನೆ

Prasthutha|

ಬೆಂಗಳೂರು: ಕೋವಿಡ್ ನಿರ್ಬಂಧದ ಮಧ್ಯೆ ಸೌದಿ ಅರೇಬಿಯಾ ಪ್ರಾಧಿಕಾರವು ಈ ವರ್ಷ ಹಜ್ ಯಾತ್ರೆಗೆ ಅನುಮತಿಯನ್ನು ತೀವ್ರವಾಗಿ ಕಡಿತಗೊಳಿಸಿದ್ದು, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯಾವುದೇ ವಿಮಾನಗಳು ಲಭ್ಯವಿರುವುದಿಲ್ಲ ಎಂದು ರಾಜ್ಯ ಹಜ್ ಸಮಿತಿ ಸದಸ್ಯ ಎ.ಬಿ. ಮುಹಮ್ಮದ್ ಹನೀಫ್ ನಿಝಾಮಿ ತಿಳಿಸಿದ್ದಾರೆ.

- Advertisement -

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಕಾರಣದಿಂದ ಸೌದಿ ಅರೇಬಿಯಾ 2020 ಮತ್ತು 2021 ರ ಸಾಲಿನಲ್ಲಿ ಹಜ್ ಯಾತ್ರೆಗೆ ಅನುಮತಿಯನ್ನು ನಿರ್ಬಂಧಿಸಿದೆ. ಈ ವರ್ಷ ಸರ್ಕಾರವು 65 ಮತ್ತು ಮೇಲ್ಪಟ್ಟ ವಯಸ್ಕರಿಗೆ ಹಜ್ ಯಾತ್ರೆಗೆ ತೆರಳಲು ನಿಷೇಧ ಹೇರಿದೆ. ಈ ನಿಟ್ಟಿನಲ್ಲಿ ಕರ್ನಾಟಕದಿಂದ 2752 ಸೇರಿದಂತೆ ಭಾರತದಿಂದ 77,200 ಒಟ್ಟು ಯಾತ್ರಿಕರು ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಜನರು ಮೇ 29 ರಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿವಿಧ ಬ್ಯಾಚ್‌ಗಳಲ್ಲಿ ತೀರ್ಥಯಾತ್ರೆಗೆ ಪ್ರಯಾಣ ನಡೆಸುತ್ತಾರೆ ಎಂದು ಅವರು ತಿಳಿಸಿದ್ದಾರೆ.

- Advertisement -

ಪ್ರಸಕ್ತ ಸಾಲಿನಲ್ಲಿ ಬೆಂಗಳೂರಿನಿಂದ 773, ಕಲಬುರಗಿಯಿಂದ 592, ಹುಬ್ಬಳ್ಳಿಯಿಂದ 433, ದಕ್ಷಿಣ ಕನ್ನಡದಿಂದ 253, ವಿಜಯಪುರದಿಂದ 214, ಮೈಸೂರಿನಿಂದ 167 ಮತ್ತು ಶಿವಮೊಗ್ಗದಿಂದ 160 ಯಾತ್ರಾರ್ಥಿಗಳು ಈ ಸಲ ಹಜ್ ಗೆ ತೆರಳಲಿದ್ದಾರೆ ಎಂದು ನಿಝಾಮಿ ತಿಳಿಸಿದ್ದಾರೆ.

ಮೇ 24 ರಂದು ನಗರದ ಬೈಕಂಪಾಡಿ ಇಂಡಸ್ಟ್ರಿಯಲ್ ಟೌನ್‌ಶಿಪ್‌ನಲ್ಲಿರುವ ಅಡ್ಕ ಸಭಾಂಗಣದಲ್ಲಿ ದಕ್ಷಿಣ ಕನ್ನಡದ ಯಾತ್ರಾರ್ಥಿಗಳಿಗೆ ನಾವು ಬೀಳ್ಕೊಡುತ್ತೇವೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಬೀಳ್ಕೊಡುಗೆ ಸಂದರ್ಭದಲ್ಲಿ ಯಾತ್ರಾರ್ಥಿಗಳಿಗೆ ಸುರಕ್ಷತಾ ಪ್ರೋಟೋಕಾಲ್ ಮತ್ತು ಯಾತ್ರೆಯ ಸಮಯದಲ್ಲಿ ಅವರು ತೆಗೆದುಕೊಳ್ಳಬೇಕಾದ ಇತರ ಮುನ್ನೆಚ್ಚರಿಕೆಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಮಂಗಳೂರು ಶಾಸಕ ಯು.ಟಿ. ಖಾದರ್ ಹಾಗೂ MLC ಬಿ.ಎಂ. ಫಾರೂಕ್ ಸೇರಿದಂತೆ ಹಲವಾರು ಗಣ್ಯರು ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.



Join Whatsapp