ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ರಾಮ್ ಸನೆಹಿ ಪ್ರದೇಶದ ಧ್ವಂಸಗೈಯ್ಯಲ್ಪಟ್ಟ ಮಸೀದಿಯ ಆಡಳಿತ ಸಮಿತಿ ಸದಸ್ಯರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಅಲಹಾಬಾದ್ ಹೈಕೋರ್ಟ್ನ ಲಕ್ನೋ ನ್ಯಾಯಪೀಠ ಸೂಚಿಸಿದೆ.
ಸಮಿತಿಯ ಅಧ್ಯಕ್ಷ ಮುಶ್ತಾಕ್ ಅಲಿ, ಉಪಾಧ್ಯಕ್ಷ ವಖೀಲ್ ಅಹ್ಮದ್, ಕಾರ್ಯದರ್ಶಿಗಳಾದ ಮುಹಮ್ಮದ್ ಅನೀಸ್, ದಸ್ತಗೀರ್, ಅಫ್ಝಲ್ ಮುಹಮ್ಮದ್ ನಸೀಮ್ ಮತ್ತು ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಟ್ ಇನ್ಸ್ ಪೆಕ್ಟರ್ ಮುಹಮ್ಮದ್ ತಾಹಾ ಅವರ ವಿರುದ್ಧ ಸ್ಥಳೀಯ ಪೊಲೀಸರು ಈಗಾಗಲೇ ಎಫ್ ಐಆರ್ ದಾಖಲಿಸಿದ್ದಾರೆ. ಇವರೆಲ್ಲರೂ ಮಸೀದಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪ ಎದುರಿಸುತ್ತಿದ್ದಾರೆ.
ನ್ಯಾಯಮೂರ್ತಿಗಳಾದ ಅತಾವುರ್ರಹ್ಮಾನ್ ಮಸೂದಿ ಮತ್ತು ಅಜಯ್ ಕುಮಾರ್ ಶ್ರೀವಾಸ್ತವ ಅವರು ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಸೂಚಿಸಿದರು. ಈ ಸಂಬಂಧ ಪ್ರತಿ ಅಫಿಡವಿಟ್ ಸಲ್ಲಿಸಲು ಸರ್ಕಾರಕ್ಕೆ ಮೂರು ವಾರಗಳ ಕಾಲಾವಕಾಶ ನೀಡಿದರು.
“ಈ ಮಧ್ಯೆ, ಸೆಕ್ಷನ್ 173 (2) ಸಿ.ಆರ್.ಪಿ.ಸಿ. ಅಡಿಯಲ್ಲಿ ಪೊಲೀಸ್ ವರದಿಯನ್ನು ಸಲ್ಲಿಸುವವರೆಗೆ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ. ಅರ್ಜಿದಾರರು ತನಿಖೆಗೆ ಸಹಕರಿಸಬೇಕು. ವಿಚಾರಣೆಗೆ ಕರೆದಾಗ ಹಾಜರಾಗಬೇಕು ಎಂದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸುಳ್ಳು ಅಥವಾ ನಕಲಿ ದಾಖಲೆಗಳ ಕುರಿತು ನ್ಯಾಯಾಲಯಕ್ಕೆ ಯಾವುದೇ ಪುರಾವೆಗಳನ್ನು ಸರ್ಕಾರ ಸಲ್ಲಿಸಿಲ್ಲ ಎಂದು ನ್ಯಾಯಾಧೀಶರು ಹೇಳಿದರು.