ಆರೋಪಿಗಳ ಮನೆ ಧ್ವಂಸ ಗ್ಯಾಂಗ್’ವಾರ್ ಸಮಾನವಾದ ದುಷ್ಕೃತ್ಯ : ಸರ್ಕಾರದ ವಿರುದ್ಧ ಹೈಕೋರ್ಟ್ ಗರಂ

Prasthutha|

ಗುವಾಹಟಿ: ಆರೋಪಿಗಳ ಮನೆಗಳನ್ನು ಬುಲ್ಡೋಝರ್ ಬಳಸಿ ಧ್ವಂಸಗೊಳಿಸುವುದು ಗ್ಯಾಂಗ್’ವಾರ್’ಗೆ ಸಮಾನವಾದ ದುಷ್ಕೃತ್ಯ ಎಂದು ಗುವಾಹಟಿ ಹೈಕೋರ್ಟ್ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದೆ. ಅಲ್ಲದೆ ಆರೋಪಿಯ ಮನೆ ಧ್ವಂಸಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

- Advertisement -

ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದವರ ಮನೆ, ಆಸ್ತಿ-ಪಾಸ್ತಿ ಧ್ವಂಸಗೊಳಿಸಿದ ಅಸ್ಸಾಂ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ನಗಾಂವ್’ನ ಪೊಲೀಸ್ ಠಾಣೆಗೆ ಬೆಂಕಿ ಹಾಕಿದ ಪ್ರಕರಣದ ಆರೋಪಿಗಳ ಮನೆಗಳನ್ನು ಧ್ವಂಸಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತವಾಗಿ ವಿಚಾರಣೆ ಆರಂಭಿಸಿದ ಗುವಾಹಟಿ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ ಈ ದುಷ್ಕೃತ್ಯವನ್ನು ಗ್ಯಾಂಗ್’ವಾರ್’ಗೆ ಹೋಲಿಸಿದೆ.

- Advertisement -

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮೀನು ವ್ಯಾಪಾರಿ ಶಫೀಕುಲ್ ಇಸ್ಲಾಮ್ ಎಂಬಾತನನ್ನು ಕೆಲವು ತಿಂಗಳ ಹಿಂದೆ ಬಂಧಿಸಲಾಗಿತ್ತು. ಪೊಲೀಸರ ಕಸ್ಟಡಿಯಲ್ಲಿದ್ದ ಶಫೀಕುಲ್ ಇಸ್ಲಾಮ್ ಅವರು ಬಂಧನದ ಮರುದಿನ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಬತದ್ರಾವ ಪೊಲೀಸ್ ಠಾಣೆಗೆ ಗುಂಪೊಂದು ಬೆಂಕಿ ಹಚ್ಚಿತ್ತು. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಶಫೀಕುಲ್ ಇಸ್ಲಾಮ್ ಅವರ ಮನೆ ಸೇರಿದಂತೆ ಕನಿಷ್ಠ 6 ಮನೆಗಳನ್ನು ಜೆಸಿಬಿ ಬಳಸಿ ಧ್ವಂಸಗೊಳಿಸಿತ್ತು.

ಯಾವುದೇ ಗಂಭೀರವಾದ ವಿಷಯದ ಕುರಿತು ತನಿಖೆ ನಡೆಸುವ ಸಂದರ್ಭದಲ್ಲೂ ಆರೋಪಿಗಳ ಮನೆಗಳನ್ನು ಬುಲ್ಡೋಝರ್ ಕಾರ್ಯಾಚರಣೆ ನಡೆಸಿ ಧ್ವಂಸಗೊಳಿಸುವ ಅವಕಾಶ ಕಾನೂನಿನಲ್ಲಿ ಇಲ್ಲವೆಂದು ಮುಖ್ಯ ನ್ಯಾಯಮೂರ್ತಿ ಆರ್.ಎಂ ಛಾಯಾ ತಿಳಿಸಿದ್ದಾರೆ.

ಧ್ವಂಸಗೊಂಡ ಮನೆಯಲ್ಲಿ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ತನಿಖಾಧಿಕಾರಿಗಳು ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಇದು ಕಟ್ಟುಕಥೆ ಯಾಕಾಗಿರಬಾರದು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.



Join Whatsapp