ನಾಡು-ನುಡಿ, ಜಲ-ಭೂಮಿ ವಿಚಾರದಲ್ಲಿ ರಾಜಿ ಇಲ್ಲ: ಸಿಎಂ ಸಿದ್ದರಾಮಯ್ಯ

Prasthutha|

►ಕಾವೇರಿ ವಿವಾದ ಸಂಬಂಧ ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗ ಹೋಗಲು ಚಿಂತನೆ

- Advertisement -

ಬೆಂಗಳೂರು : ಕನ್ನಡ ನಾಡು, ನುಡಿ, ಜಲ, ಭೂಮಿ, ಸಂಸ್ಕೃತಿಯ ಹಿತ ಕಾಪಾಡುವ ವಿಷಯದಲ್ಲಿ ರಾಜಿಯಾಗುವ ಮಾತೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕಾವೇರಿ, ಮೇಕೆದಾಟು, ಮಹದಾಯಿ ಜಲ ವಿವಾದಗಳ ಸಂಬಂಧ ವಿಧಾನಸೌಧದಲ್ಲಿ ನಡೆದ ಸರ್ವಪಕ್ಷ ಸಭೆಯ ಬಳಿಕ ಮಾತನಾಡಿದ ಅವರು, 7 ಕೋಟಿ ಕನ್ನಡಿಗರ ಹಿತ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿರುವುದರಿಂದ ನ್ಯಾಯ ಪಡೆಯಲು ಎಲ್ಲಾ ಪಕ್ಷದವರು ಸೇರಿ ಶ್ರಮಿಸಬೇಕು ಎಂದು ಮನವಿ ಮಾಡಿದರು.


ಕಾವೇರಿ, ಮಹದಾಯಿ, ಮೇಕೆದಾಟು ವಿಚಾರದಲ್ಲಿ ಪ್ರಧಾನಿಯವರ ಬಳಿಗೆ ಸರ್ವ ಪಕ್ಷ ನಿಯೋಗ ಕರೆದೊಯ್ಯುವ ಚಿಂತನೆ ಮಾಡಿದ್ದೇವೆ ಎಂದು ತಿಳಿಸಿದ ಅವರು, ಸರ್ವ ಪಕ್ಷ ನಿಯೋಗಕ್ಕೆ ಎಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದರು.

- Advertisement -


ಕಾವೇರಿ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಅಧಿಕಾರಿಗಳು ಮತ್ತು ವಕೀಲರು ವಾಸ್ತವ ಸ್ಥಿತಿಯನ್ನು ಸಮರ್ಥವಾಗಿ ಮಂಡಿಸಿದ್ದಾರೆ. ಕರ್ನಾಟಕ ಸಮರ್ಥವಾಗಿ ವಾದ ಮಂಡಿಸಿದ್ದರಿಂದ ತಮಿಳುನಾಡಿಗೆ ಕಡಿಮೆ ನೀರು ಹರಿಸಲು ಆದೇಶವಾಯಿತು. ತಮಿಳುನಾಡಿಗೆ 15 ಸಾವಿರ ಕ್ಯೂಸೆಕ್ ನೀರು ಹರಿಸಲು ಸಾಧ್ಯವಿಲ್ಲ ಎಂದು ನಾವು ವಾದ ಮಂಡಿಸಿದಾಗ ತಮಿಳುನಾಡಿನವರು ಮಧ್ಯದಲ್ಲಿಯೇ ಎದ್ದು ಹೋಗಿದ್ದಾರೆ. ಬಳಿಕ 10 ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶವಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ 10 ಸಾವಿರ ಕ್ಯೂಸೆಕ್ ನೀರು ಬಿಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟಿನಲ್ಲಿ ಸಮರ್ಥ ವಾದ ಮಂಡಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಕಾವೇರಿ ಜಲಾಯನ ಪ್ರದೇಶದಲ್ಲಿ ನಮ್ಮ ಬೆಳೆ ರಕ್ಷಣೆ ಮಾಡಲು ಮತ್ತು ರೈತರ ಹಿತ ಕಾಪಾಡಲು ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದ ಸಿಎಂ, ನಮ್ಮ ರೈತರ ಹಿತಾಸಕ್ತಿ ಕಾಪಾಡುವ ವಿಚಾರದಲ್ಲಿ ರಾಜಕೀಯ ಮಾಡಲ್ಲ, ರಾಜಿಯೂ ಮಾಡಲ್ಲ ಎಂದ ಹೇಳಿದರು.


ಕಾವೇರಿ ನೀರಿನ ವಿಚಾರದಲ್ಲಿ ಸರ್ವ ಪಕ್ಷ ನಾಯಕರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಸಿಎಂ ಭರವಸೆ ನೀಡಿದರು.


ಸರ್ವಪಕ್ಷಗಳ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ಹೆಚ್.ಡಿ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ವೀರಪ್ಪ ಮೊಯಿಲಿ, ಡಿ.ವಿ. ಸದಾನಂದಗೌಡ, ಜಗದೀಶ್ ಶೆಟ್ಟರ್, ಸಚಿವರಾದ ಡಿ.ಕೆ ಶಿವಕುಮಾರ್, ಡಾ. ಜಿ. ಪರಮೇಶ್ವರ್, ಕೆ.ಜೆ. ಜಾರ್ಜ್‌, ಹೆಚ್‌.ಕೆ. ಪಾಟೀಲ್, ಕೃಷ್ಣಭೈರೇಗೌಡ, ಚಲುವರಾಯಸ್ವಾಮಿ, ಹಲವು ಶಾಸಕರು ಮತ್ತು ಸಂಸದರು, ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ, ವಕೀಲರಾದ ಮೋಹನ್‌ ಕಾತರಕಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಮತ್ತು ಕಾನೂನು ತಜ್ಞರು ಹಾಜರಿದ್ದರು.



Join Whatsapp